ದೇಶ

ಪಾಸ್'ಪೋರ್ಟ್ ವಿವಾದ: ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಮಾನಿಯನ್ನು ಬ್ಲಾಕ್ ಮಾಡಿದ ಸುಷ್ಮಾ ಸ್ವರಾಜ್

Manjula VN
ಬೆಂಗಳೂರು: ಹಿಂದೂ-ಮುಸ್ಲಿಂ ದಂಪತಿಗೆ ಪಾಸ್'ಪೋರ್ಟ್ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅಭಿಮಾನಿಯೊಬ್ಬರನ್ನು ಬ್ಲಾಕ್ ಮಾಡುವ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
ಪೊಲೀಸ ವರದಿಗಳನ್ನು ಕಡೆಗಣಿಸಿ ದಂಪತಿಗಳಿಗೆ ಪಾಸ್'ಪೋರ್ಟ್ ನೀಡಲಾಗಿದೆ. ಉತ್ತಮ ಆಡಳಿತ ನೀಡಲು ಬಂದಿದ್ದರು. ನೋಡಿ, ಉತ್ತಮ ದಿನಗಳು ಬಂದಿವೆ. ಸುಷ್ಮಾ ಅವರೇ, ನಾನು ನಿಮ್ಮ ಅಭಿಮಾನಿ. ನಿಮ್ಮನ್ನು ಅವಹೇಳನ ಮಾಡುವವರನ್ನು ವಿರೋಧಿಸುತ್ತೇನೆ. ಈಗ ನೀವು ನನ್ನನ್ನು ಟ್ವಿಟರ್ ನಲ್ಲಿ ಬ್ಲಾಕ್ ಮಾಡುವ ಮೂಲಕ ಪೀರಿತೋಷಕವನ್ನು ನೀಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿರುತ್ತೇನೆಂದು ಸೋನಮ್ ಎಂಬುವವರು ಟ್ವೀಟ್ ಮಾಡಿ ಅದನ್ನು ಸುಷ್ಮಾ ಅವರಿಗೆ ಟ್ಯಾಗ್ ಮಾಡಿದ್ದರು.
ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಅವರು, ಕಾಯುವುದು ಏಕೆ? ಇದೋ ನಿಮ್ಮನ್ನು ಬ್ಲಾಕ್ ಮಾಡಿದ್ದೇನೆಂದು ಹೇಳಿದ್ದಾರೆ. ಈ ಮೂಲಕ ಟ್ರೋಲ್ ಮಾಡುತ್ತಿರುವವರಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹಿಂದೂ-ಮುಸ್ಲಿಂ ದಂಪತಿಗೆ ಅಧಿಕಾರಿಯೊಬ್ಬರು ಪಾಸ್'ಪೋರ್ಟ್ ನಿರಾಕರಿಸಿದ್ದರಲ್ಲದೆ, ದಂಪತಿಗಳಿಗೆ ಅವಮಾನ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಅಧಿಕಾರಿವಿರುದ್ಧ ಕ್ರಮಕೈಗೊಂಡಿದ್ದ ಸುಷ್ಮಾ ಸ್ವರಾಜ್ ಅವರು ಅಧಿಕಾರಿಯನ್ನು ವರ್ಗಾವಣೆ ಮಾಡಿ, ಹಿಂದೂ-ಮುಸ್ಲಿಂ ದಂಪತಿಗೆ ಪಾಸ್'ಪೋರ್ಟ್ ನೀಡಿದ್ದರು. 

ಈ ಘಟನೆಗೆ ಸುಷ್ಮಾ ಸ್ವರಾಜ್ ವಿರುದ್ಧ ಹಲವರು ಟೀಕೆಗಳನ್ನು ಮಾಡಿದ್ದರು. ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದರು. ಅಧಿಕಾರಿ ತಮ್ಮ ಕರ್ತವ್ಯವನ್ನು ಮಾಡಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು. ಇದರಂತೆ ಸುಷ್ಮಾ ಸ್ವರಾಜ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. 

ಬಳಿಕ ಟ್ರೋಲ್ ಆಗುತ್ತಿರುವ ಕುರಿತಂತೆ ಟ್ವಿಟರ್ ನಲ್ಲಿ ಪೋಲ್ ವೊಂದರಲ್ಲಿ ಸುಷ್ಮಾ ಅವರು ಜನರ ಅಭಿಪ್ರಾಯವನ್ನು ಕೇಳಿದ್ದರು. ಅದರಲ್ಲಿ ಶೇ.43ರಷ್ಟು ಜನರು ನಿಂದನೀಯ ಟ್ವೀಟ್ ಗಳನ್ನು ಸಮರ್ಥಿಸಿಕೊಂಡಿದ್ದರೆ, ಶೇ.57ರಷ್ಟು ಜನರು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು. 

ಶೇ.43ರಷ್ಟು ಮಂದಿ ನಿಂದನೀಯ ಟ್ವೀಟ್ ಸಮರ್ಥಿಸಿಕೊಂಜಿರುವುದನ್ನು ಒಮರ್ ಅಬ್ದುಲ್ಲಾ ಅವರು ಖಂಡಿಸಿದ್ದರಲ್ಲದೆ, ನಿಂದನೀಯ ಟ್ವೀಟ್'ಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಜನರಿಗೆ ನಾಚಿಕೆಯಾಗಬೇಕೆಂದು ಸುಷ್ಮಾ ಸ್ವರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. 
SCROLL FOR NEXT