ಲಖನೌ; ಪಾಸ್ ಪೋರ್ಟ್ ವಿಚಾರ ಸಂಬಂಧ ಹಿಂದೂ-ಮುಸ್ಲಿಂ ದಂಪತಿಗಳಿಗೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸಿರುವ ವಿದೇಶಾಂಗ ಸಚಿವಾಲಯವು ಅಧಿಕಾರಿಯಿಂದಲೇ ಕರ್ತವ್ಯ ಲೋಪವಾಗಿದೆ ಎಂದು ಬುಧವಾರ ಹೇಳಿದೆ.
ಅರ್ಜಿಗಳ ಪರಿಶೀಲನೆಗೆ ಕಚೇರಿಗೆ ಬಂದಿದ್ದ ದಂಪತಿಗಳಿಗೆ ಅಧಿಕಾರಿ ಕಿರುಕುಳ ನೀಡಿದ್ದಾರೆ. ಪಾಸ್'ಪೋರ್ಟ್ ನೀಡಲು ಅರ್ಜಿದಾರರ ಧರ್ಮದ ಬಗ್ಗೆ ಯಾವುದೇ ವಿವರ ಅನಗತ್ಯವಾಗಿರುತ್ತದೆ. ಆಧರೆ, ಅಧಿಕಾರಿ ಅರ್ಜಿದಾರರ ಧರ್ಮದ ಬಗ್ಗೆ ಅನಗತ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಂತೆ ಕರ್ತವ್ಯದ ನಿಯಮಗಳನ್ನು ಮೀರಿದ್ದಾರೆ. ಹೀಗಾಗಿಯೇ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು ಎಂದು ಮೂಲಗಳು ತಿಳಿಸಿವೆ.
ಪಾಸ್ ಪೋರ್ಟ್'ಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ದಂಪತಿಗಳು ಸಲ್ಲಿಸಿದ್ದಾರೆ. ದಂಪತಿಗಳಾದ ಸೇಠ್ ಮತ್ತು ಸಿದ್ಧಿಕಿಯವರಿಂದ ಯಾವುದೇ ತಪ್ಪುಗಳಾಗಿಲ್ಲ. ಪಾಸ್'ಪೋರ್ಟ್'ಗೆ ವಿವಾಹ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ತನಿಖಾ ವರದಿ ತಿಳಿಸಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಹಿಂದೂ-ಮುಸ್ಲಿಂ ದಂಪತಿಗೆ ಅಧಿಕಾರಿಯೊಬ್ಬರು ಪಾಸ್'ಪೋರ್ಟ್ ನಿರಾಕರಿಸಿದ್ದರಲ್ಲದೆ, ದಂಪತಿಗಳಿಗೆ ಅವಮಾನ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಅಧಿಕಾರಿವಿರುದ್ಧ ಕ್ರಮಕೈಗೊಂಡಿದ್ದ ಸುಷ್ಮಾ ಸ್ವರಾಜ್ ಅವರು ಅಧಿಕಾರಿಯನ್ನು ವರ್ಗಾವಣೆ ಮಾಡಿ, ಹಿಂದೂ-ಮುಸ್ಲಿಂ ದಂಪತಿಗೆ ಪಾಸ್'ಪೋರ್ಟ್ ನೀಡಿದ್ದರು.
ಈ ಘಟನೆಗೆ ಸುಷ್ಮಾ ಸ್ವರಾಜ್ ವಿರುದ್ಧ ಹಲವರು ಟೀಕೆಗಳನ್ನು ಮಾಡಿದ್ದರು. ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದರು. ಅಧಿಕಾರಿ ತಮ್ಮ ಕರ್ತವ್ಯವನ್ನು ಮಾಡಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು. ಇದರಂತೆ ಸುಷ್ಮಾ ಸ್ವರಾಜ್ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದರು.