ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11.400 ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ರಾಜಕೀಯ ಆಶ್ರಯ ಬಯಸಿದ್ದಾನೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀರವ್ ಮೋದಿ ಇಂಗ್ಲೆಂಡ್ ನಲ್ಲಿ ರಾಜಕೀಯ ಆಶ್ರಯ ಬಯಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಆ ದೇಶದಲ್ಲಿ ನೀರವ್ ಮೋದಿ ರಾಜಕೀಯ ಆಶ್ರಯ ಪಡೆಯಲು ಮುಂದಾಗಿರುವ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ ಎಂದು ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ.
2 ಬಿಲಿಯನ್ ಅಮೆರಿಕನ್ ಡಾಲರ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಸಿಬಿಐಗೆ ಬೇಕಾಗಿದ್ದಾನೆ. ನೀರವ್ ಮೋದಿ ಹಾಗೂ ಆತನ ಸಹೋದರ ನಿಶಾಲ್ ಮೋದಿ, ನೈಕರ ಸುಭಾಶ್ ಪರಾಬ್ ವಿರುದ್ಧ ಇಂಟರ್ ಪೋಲ್ ಪೊಲೀಸರು ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ.
ಕೆಲ ವಾರಗಳ ಹಿಂದೆ ನೀರವ್ ಮೋದಿ ಇಂಗ್ಲೆಂಡ್, ಫ್ರಾನ್ಸ್ ಬೆಲ್ಜಿಯಂ ಮತ್ತಿತರ ರಾಷ್ಟ್ರಗಳಿಗೆ ಭೇಟಿ ನೀಡಿರುವ ಬಗ್ಗೆ ವರದಿಗಳು ಕೇಳಿಬಂದಿವೆ. ನೀರವ್ ಮೋದಿ ಕಂಡಲ್ಲಿ ಆತನನ್ನು ಬಂಧಿಸುವಂತೆ 192 ಸದಸ್ಯ ರಾಷ್ಟ್ರಗಳಿಗೆ ಇಂಟರ್ ಪೋಲ್ ಮಾಹಿತಿ ನೀಡಿದೆ.
ನೀರವ್ ಮೋದಿ ಜೊತೆಗೆ ಅಮೆರಿಕಾ ನಾಗರಿಕತೆ ಹೊಂದಿರುವ ಆತನ ಹೆಂಡತಿ ಅಮಿ ಮೋದಿ, ಸಹೋದರ, ಬೆಲ್ಜಿಯಂ ನಾಗರಿಕ ನಿಶಾಲ್ ಮೋದಿ, ಹಾಗೂ ಸಂಬಂಧಿ ಮೆಹೂಲ್ ತೊಕ್ಸಿ ವಿರುದ್ಧ ಸಿಬಿಐ ಎಫ್ ಐ ಆರ್ ದಾಖಲಿಸಿಕೊಂಡಿದ್ದು, ಹುಡುಕಾಟ ನಡೆಸುತ್ತಿದೆ.
ನೀರವ್ ಮೋದಿ ಬಂಧನಕ್ಕಾಗಿ ವಿದೇಶಾಂಗ ವ್ಯವಹಾರಗಳ ಇಲಾಖೆ ಅನೇಕ ಯುರೋಪಿಯನ್ ರಾಷ್ಟ್ರಗಳಿಗೆ ಪತ್ರ ಬರೆದಿದೆ.