ದೇಶ

ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆ ಜಾರಿಗೆ ದೆಹಲಿ ಸಿಎಂ ಕೇಜ್ರಿವಾಲ್ ಆದೇಶ

Lingaraj Badiger
ನವದೆಹಲಿ: ದೆಹಲಿ ಸರ್ಕಾರದ ಬರು ನಿರೀಕ್ಷಿತ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಒಪ್ಪಿಗೆ ನೀಡಿದ್ದು, ಯೋಜನೆಯನ್ನು ತಕ್ಷಣದಿಂದ ಜಾರಿಗೊಳಿಸುವಂತೆ ಆಹಾರ ಇಲಾಖೆಗೆ ಸೂಚಿಸಿದ್ದಾರೆ.
ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಗೆ ಅಂಗೀಕಾರ ನೀಡಲಾಗಿದೆ. ಈ ಪ್ರಸ್ತಾವನೆಗೆ ಇದ್ದ ಎಲ್ಲಾ ಆಕ್ಷೇಪಗಳನ್ನು ತಳ್ಳಿಹಾಕಲಾಗಿದ್ದು, ತಕ್ಷಣದಿಂದ ಯೋಜನೆ ಜಾರಿಗೊಳಿಸಿ ನಿತ್ಯ ಅದರ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.
ಆಮ್ ಆದ್ಮಿ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಡುವಿನ ಬಿಕ್ಕಟ್ಟಿಗೆ ಮನೆ ಬಾಗಿಲಿಗೆ ಪಡಿತರ ವಿತರಣೆ ಪ್ರಮುಖ ಕಾರಣವಾಗಿತ್ತು. ಅಲ್ಲದೆ ಮನೆ ಬಾಗಿಲಿಗೆ ಪಡಿತರ ನೀಡುವ ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದ್ದರು.
ಈಗ ಯೋಜನೆ ಜಾರಿಗೆ ದೆಹಲಿ ಸರ್ಕಾರ ಆದೇಶಿಸಿದ್ದು, ಮತ್ತೆ ಲೆಫ್ಟಿನೆಂಟ್ ಗವರ್ನರ್ ಹಾಗೂ ಆಪ್ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಪಡಿತರ ಕಳ್ಳತನ, ಕಳಪೆ ಗುಣಮಟ್ಟದ ಪಡಿತರ ಹಾಗೂ ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ದೆಹಲಿ ಸರ್ಕಾರ ಈ ಹೊಸ ಯೋಜನೆ ಜಾರಿಗೆ ತರುತ್ತಿದೆ ಎಂದು ಈ ಹಿಂದೆ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಹೇಳಿದ್ದರು.
SCROLL FOR NEXT