ದೇಶ

ಸುಪ್ರೀಂ ಆದೇಶಕ್ಕೆ ಕೇಂದ್ರ ವಿರೋಧ, ಅರಾಜಕತೆಗೆ ಕಾರಣವಾಗಲಿದೆ: ದೆಹಲಿ ಸಿಎಂ ಕೇಜ್ರಿವಾಲ್

Lingaraj Badiger
ನವದೆಹಲಿ: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬಹಿರಂಗವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದ್ದು, ಇದು ಅರಾಜಕತೆಗೆ ಕಾರಣವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ಬೈಜಾಲ್ ಅವರು ಸೇವಾ ಇಲಾಖೆಗಳನ್ನು ಚುನಾಯಿತ ಸರ್ಕಾರದ ಅಧಿನಕ್ಕೆ ಕೊಡಲು ಒಪ್ಪುತ್ತಿಲ್ಲ ಮತ್ತು ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದ ಸಲಹೆ ಪಡೆದಿದ್ದಾರೆ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್, ಪೊಲೀಸ್, ಭೂ ಮತ್ತು ಸಾರ್ವಜನಿಕ ಆದೇಶ ಹೊರತುಪಡಿಸಿ ಇತರೆ ವಿಷಯಗಳಲ್ಲಿ ದೆಹಲಿ ಸರ್ಕಾರ ಕಾರ್ಯನಿರ್ವಾಹಕ ಅಧಿಕಾರ ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಲೆಫ್ಟಿನೆಂಟ್ ಗವರ್ನರ್ ಅವರು ಸೇವಾ ಇಲಾಖೆಗಳನ್ನು ಸರ್ಕಾರ ಅಧಿನಕ್ಕೆ ಕೊಡಲು ಒಪ್ಪುತ್ತಿಲ್ಲ ಎಂದರು.
ಲೆಫ್ಟಿನೆಂಟ್ ಗವರ್ನರ್ ಅವರು ಗೃಹ ಸಚಿವಾಲಯದ ಸಲಹೆ ಪಡೆದಿದ್ದು, ಅವರು ಸೇವೆಗಳನ್ನು ದೆಹಲಿ ಸರ್ಕಾರಕ್ಕೆ ಕೊಡಬೇಡಿ ಎಂದು ಹೇಳಿರುವುದಾಗಿ ಕೇಜ್ರಿವಾಲ್ ದೂರಿದ್ದಾರೆ.
ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಬಿಕ್ಕಿಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿನ್ನೆ ಮಹತ್ವದ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೆ ತಂದಿತ್ತು. ಅಲ್ಲದೆ ಕೇಜ್ರಿವಾಲ್ ಅವರು ಇಂದು ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆ ಜಾರಿಗೆ ಆದೇಶಿಸಿದ್ದರು. 
SCROLL FOR NEXT