ದೊಡಾ (ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳ್ಳುತ್ತಿರು ಸಂಖ್ಯೆ ಏರುತ್ತಲೇ ಇದ್ದು, ಇದರಂತೆ ಜಮ್ಮು ಮತ್ತು ಕಾಶ್ಮೀರ ದೊಡಾ ಜಿಲ್ಲೆಯ ನಿವಾಸಿಯಾಗಿದ್ದ ಮತ್ತೊಬ್ಬ ಯುವಕ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ದೊಡಾ ಜಿಲ್ಲೆಯ ಸಜನ್ ಗ್ರಾಮದ ನಿವಾಸಿಯಾಗಿದ್ದ ಅಬಿದ್ ಹುಸೇನ್ ಭಟ್ ಹಲವು ದಿನಗಳಿಂದ ನಾಪತ್ತೆಯಾಗಿದ್ದ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಬಿದ್ ಫೋಟೋ ವೊಂದು ಹರಿದಾಡುತ್ತಿದ್ದು, ಫೋಟೋದಲ್ಲಿ ಅಬಿದ್ ಗನ್ ಹಿಡಿದುಕೊಂಡಿರುವುದು ಕಂಡು ಬಂದಿದೆ.
ಜೂ.30 ರಿಂದ ಅಬಿದ್ ನಾಪತ್ತೆಯಾಗಿದ್ದ. ಪುತ್ರನಿಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದರು. ಇದೀಗ ಪುತ್ರ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾಗಿದ್ದಾರೆ.
ಅಬಿದ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಬಂದಿದೆ. ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಉಗ್ರರೊಂದಿಗೆ ಅಬಿದ್ ಹೇಗೆ ಸಂಪರ್ಕ ಹೊಂದಿದ್ದ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ದೊಡಾ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಶಬೀರ್ ಅಹಮದ್ ಅವರು ಹೇಳಿದ್ದಾರೆ.
ಸ್ಥಳೀಯ ಪೊಲೀಸರು ಕರೆ ಮಾಡಿ ನನ್ನ ಸಹೋದರ ಬಗ್ಗೆ ಮಾಹಿತಿ ಕೇಳಿದ್ದರು. ಆಗಲೇ ನನ್ನ ಸಹೋದರ ನಾಪತ್ತೆಯಾಗಿದ್ದಾನೆಂಬುದು ತಿಳಿದುಬಂದಿತ್ತು. ಅಬಿದ್ ಎಲ್ಲಿದ್ದಾನೆಂಬುದು ನನಗೆ ಗೊತ್ತಿಲ್ಲ. ಕೆಲಸದ ಮೇರೆಗೆ ಹೊರಗೆ ಹೋಗುತ್ತಿದ್ದ ಅಬಿದ್, ಎರಡು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದ ಎಂದು ಅಬಿದ್ ಹಿರಿಯ ಸಹೋದರ ರೆಹ್ಮತುಲ್ಲಾ ಭಟ್ ಅವರು ಹೇಳಿದ್ದಾರೆ.