ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಂತ್ರಸ್ಥೆ ಪೋಷಕರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯ ಸಿಗಲು ವಿಳಂಬವಾಯಿತು ಎಂದಿದ್ದಾರೆ.
ಗಲ್ಲು ಶಿಕ್ಷೆ ವಿರುದ್ಧ ಮೂವರು ಅಪರಾಧಿಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ಥ ಮಹಿಳೆ ತಂದೆ ಬದ್ರಿನಾಥ್ ಸಿಂಗ್ ಅವರು, ಸುಪ್ರೀ ತೀರ್ಪಿನಿಂದ ನಮ್ಮ ನಂಬಿಕೆ ನಿಜವಾಗಿದೆ. ಆದರೆ ಮುಂದೇನು? ಈಗಾಗಲೇ ಸಾಕಷ್ಟು ಸಮಯ ಕಳೆದಿದೆ. ಆದಷ್ಟು ಬೇಗ ಕಾಮುಕರನ್ನು ಗಲ್ಲಿಗೇರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮ್ಮ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ನ್ಯಾಯ ಸಿಗಲು ತುಂಬಾ ವಿಳಂಬವಾಗಿದೆ. ಇದರಿಂದ ಇತರೆ ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಕಠಿಣವಾಗಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಸಂತ್ರಸ್ಥೆ ತಾಯಿ ಆಶಾ ದೇವಿ ಅವರು ಹೇಳಿದ್ದಾರೆ.
ಇನ್ನು ಈ ವೇಳೆ ಮಾತನಾಡಿದ ಸಂತ್ರಸ್ಥೆ ಕುಟುಂಬದ ಪರ ವಕೀಲ ರೋಹನ್ ಮಹಾಜನ್ ಅವರು, ಇದೊಂದು ಗೆಲುವಿನ ಕ್ಷಣ. ನ್ಯಾಯಾಂಗದ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಮಗೆ ತೃಪ್ತಿ ಇದೆ ಎಂದರು.