ನವದೆಹಲಿ: ವಿವಾಹದ ಪಾವಿತ್ರ್ಯತೆ ಉಳಿಯಬೇಕಾದರೆ ವಿವಾಹೇತರ ಸಂಬಂಧ ಶಿಕ್ಷಾರ್ಹವಾಗಿರಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋಟ್ ಗೆ ಪ್ರಮಾಣಪತ್ರ ಸಲ್ಲಿಸಿದೆ.
ವಿವಾಹೇತರ ಸಂಬಂಧ ಪ್ರಕರಣದಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರನ್ನೂ ಸಮಾನ ಹೊಣೆಗಾರರು ಎಂದು ಪರಿಗಣಿಸಬೇಕೆಂಬ ಜೋಸೆಫ್ ಶೈನ್ ಅರ್ಜಿಗೆ ವಿರುದ್ಧವಾಗಿ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ ವಿವಾಹೇತರ ಸಂಬಂಧ ಶಿಕ್ಷಾರ್ಹವಾಗಿರಬೇಕು ಎಂದು ವಾದಿಸಿದೆ.
ವಿವಾಹದ ಪಾವಿತ್ರ್ಯತೆಯನ್ನು ಉಳಿಸುವುದಕ್ಕಾಗಿ ಐಪಿಸಿ ಸೆಕ್ಷನ್ 497 ರ ಪ್ರಕಾರ ವಿವಾಹೇತರ ಸಂಬಂಧವನ್ನು ಶಿಕ್ಷಾರ್ಹಗೊಳಿಸಲಾಗಿತ್ತು.
ಅದನ್ನು ದುರ್ಬಲಗೊಳಿಸುವುದರಿಂದ ಈಗ ವಿವಾಹದ ಪಾವಿತ್ರ್ಯತೆಯನ್ನೇ ಕಳೆದಂತಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ 157 ವರ್ಷಗಳ ಹಿಂದಿನ ಬ್ರಿಟನ್ ಕಾಲದ ಕಾನೂನಿನ ಪ್ರಕಾರ ವಿವಾವಾಗಿರುವ ಪುರುಷ, ಮತ್ತೋರ್ವ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ ಪುರುಷನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಆದರೆ ಪುರುಷರಿಗೆ ಮಾತ್ರ ಶಿಕ್ಷೆ ನೀಡುವ ಈ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2018ರ ಜನವರಿಯಲ್ಲಿ 5 ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಈ ವಿಚಾರಣೆಯನ್ನು ವರ್ಗಾಯಿಸಿತ್ತು.
ಪರ ಪುರುಷನ ಪತ್ನಿಯೊಂದಿಗೆ ಮತ್ತೋರ್ವ ವಿವಾಹಿತ ಪುರುಷ ಲೈಂಗಿಕ ಸಂಬಂಧ ಹೊಂದಿದ್ದರೆ ಅದು ಅತ್ಯಾಚಾರವಾಗುವುದಿಲ್ಲ, ಬದಲಾಗಿ ವ್ಯಭಿಚಾರವಾಗುತ್ತದೆ, ಈ ರೀತಿಯ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಪುರುಷನಿಗೆ ಐಪಿಸಿ ಸೆಕ್ಷನ್ 497 ರ ಪ್ರಕಾರ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇದಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ಮಹಿಳೆಗೆ ಶಿಕ್ಷೆ ವಿಧಿಸುವಂತಿಲ್ಲ. ಸೆಕ್ಷನ್ 497 ರಲ್ಲಿರುವ ಈ ಅಂಶವನ್ನು ಪ್ರಶ್ನಿಸಿ ಜೋಸೆಫ್ ಶೈನ್ ಅರ್ಜಿ ಸಲ್ಲಿಸಿದ್ದರು.
ಅಷ್ಟೇ ಅಲ್ಲದೇ ಸಿಆರ್ ಪಿಸಿ ಸೆಕ್ಷನ್ 198 ರ ಪ್ರಕಾರ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಪತಿಗೆ ದೂರು ನೀಡಲು ಅವಕಾಶವಿದ್ದು, ಅಕ್ರಮ ಸಂಬಂಧ ಹೊಂದಿದ್ದ ಪುರುಷನ ಪತ್ನಿಗೆ ಈ ಅವಕಾಶ ಇಲ್ಲದಿರುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. 1954 ರಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ಸೆಕ್ಷನ್ 497 ನ್ನು ಎತ್ತಿ ಹಿಡಿದಿತ್ತು.