ದೇಶ

'ವಿಶೇಷ ಸವಲತ್ತುಗಳಿಗೆ ಕತ್ತರಿ' ಎಚ್ಚರಿಕೆ ನೀಡಿದ್ದ ಇರಾನ್ ಈಗ ಭಾರತಕ್ಕೆ ತೈಲ ಪೂರೈಸುವುದಾಗಿ ಯು-ಟರ್ನ್!

Srinivas Rao BV
ನವದೆಹಲಿ: ಅಮೆರಿಕ ಒತ್ತಡದ ಹಿನ್ನೆಲೆಯಲ್ಲಿ ಭಾರತ ಇರಾನ್ ನಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ತೈಲ ಪ್ರಮಾಣವನ್ನು ತಗ್ಗಿಸಿದೆ, ಕಾರ್ಯತಂತ್ರದ ಪ್ರಮುಖ ಭಾಗವಾಗಿರುವ ಚಬಹಾರ್ ಬಂದರಿನಲ್ಲಿ ಹೂಡಿಕೆ ಮಾಡುವ ಭರವಸೆಯನ್ನೂ ಈಡೇರಿಸಿಲ್ಲ ಎಂದು ಇರಾನ್ ಭಾರತದ ಮೇಲೆ ಅಸಮಾಧಾನ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೇ ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕುವ ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಅಸಮಾಧಾನ ವ್ಯಕ್ತಪಡಿಸಿದ್ದ 24 ಗಂಟೆಗಳಲ್ಲೇ ಮೃದು ಧೋರಣೆ ತಳೆದಿದೆ. 
ನವದೆಹಲಿಯನ್ನು ತನ್ನ ವಿಶ್ವಾಸಾರ್ಹ ಮಿತ್ರ ರಾಷ್ಟ್ರ ಎಂದು ಇರಾನ್ ಬಣ್ಣಿಸಿದ್ದು, ಅಸ್ಥಿರ ಇಂಧನ (ತೈಲ) ಮಾರುಕಟ್ಟೆಯೊಂದಿಗೆ ವ್ಯವಹರಿಸುವ ವಿಷಯದಲ್ಲಿ ಭಾರತ ಎದುರಿಸುತ್ತಿರುವ ಸವಾಲು, ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳುವುದಾಗಿ ಹೇಳಿದೆ. ಅಷ್ಟೇ ಅಲ್ಲದೇ ಭಾರತಕ್ಕೆ ತೈಲ ಪೂರೈಕೆಯ ಭದ್ರತೆಯನ್ನು ಸಾಧ್ಯವಾದಷ್ಟೂ ಉತ್ತಮಗೊಳಿಸುವುದಾಗಿ ಹೇಳಿದೆ. 
ಇರಾನ್ ನ ಉಪ ರಾಯಭಾರಿ ಮಸೂದ್ ರೆಜ್ವಾನಿಯನ್ ರಹಾಘಿ ಪ್ರಮುಖ ಭಾರತ-ಇರಾನ್ ನಡುವಿನ ಕಾರ್ಯತಂತ್ರದ ಭಾಗವಾಗಿರುವ ಚಬಹಾರ್ ಬಂದರಿಗೆ ಹೂಡಿಕೆ ಮಾಡುವ ಸಂಬಂಧ ಭಾರತ ನೀಡಿದ್ದ ಭರವಸೆಗಳು ಈ ವರೆಗೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಭಾರತಕ್ಕೆ ನೀಡಲಾಗುತ್ತಿರುವ ವಿಶೇಷ ಸವಲತ್ತುಗಳಿಗೆ ಕತ್ತರಿ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಇರಾನ್ ನ ರಾಯಬಹರಿ ಕಚೇರಿಯಿಂದ ಸ್ಪಷ್ಟನೆ ಬಂದಿದ್ದು, ಭಾರತದ ಸಂಕಷ್ಟ ನಮಗೆ ಅರ್ಥವಾಗುತ್ತದೆ. ತೈಲ ಪೂರೈಕೆಯ ವಿಶ್ವಾಸಾರ್ಹತೆಯನ್ನು ಹಾಗೂ ಭೂ-ರಾಜಕೀಯ ಸ್ಥಿತಿಗತಿಗಳನ್ನು ಗಮದಲ್ಲಿಟ್ಟುಕೊಂಡು ತೈಲ(ಇಂಧನ) ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುವುದು ಭಾರತಕ್ಕೆ ಬಿಟ್ಟ ವಿಚಾರ ಎಂದು ಇರಾನ್ ಸ್ಪಷ್ಟಪಡಿಸಿದೆ. 
SCROLL FOR NEXT