ನವದೆಹಲಿ: ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿರುವ ಭಾರತ ಮತ್ತು ಅಮೆರಿಕ ನಡುವಿನ ಬಹು ನಿರೀಕ್ಷಿತ 2+2 ಮಾತುಕತೆ ಸೆಪ್ಟೆಂಬರ್ ನಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಅಮೆರಿಕದೊಂದಿಗೆ 2+2 ಮಾತುಕತೆ ನಡೆಯಲಿದೆ. ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ರಕ್ಷಣಾ ಸಹಕಾರ ಬಲಪಡಿಸುವುದೇ 2+2 ಮಾತುಕತೆಯ ಅಜೆಂಡಾ ಎಂದು ಸೀತಾರಾಮನ್ ಅವರು ತಿಳಿಸಿದ್ದಾರೆ.
ಕಳೆದ ಜುಲೈ 6ರಂದು 2+2 ಮಾತುಕತೆ ನಿಗದಿಯಾಗಿತ್ತು. ಈ ಮಾತುಕತೆಯಲ್ಲಿ ಭಾರತದ ಪರವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅಮೆರಿಕದ ಪರವಾಗಿ ವಿದೇಶಾಂಗ ಕಾರ‍್ಯದರ್ಶಿ ಮೈಕೆಲ್ ಆರ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಾಟಿಸ್ ಭಾಗವಹಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮುಂದೂಡಿಕೆಯಾಗಿತ್ತು. ಕಳೆದ ಏಪ್ರಿಲ್‌ನಲ್ಲೂ ಒಮ್ಮೆ ಇದೇ ಮಾದರಿಯ ಸಭೆ ನಿಗದಿಯಾಗಿ ಮುಂದೂಡಲ್ಪಟ್ಟಿತ್ತು.
ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಹೊಸ ಮಾದರಿಯ ಮಾತುಕತೆ ಇದಾಗಿದ್ದು, ಭಾರತ-ಅಮೆರಿಕದ ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರು ಜತೆಯಾಗಿ ಚರ್ಚೆ ನಡೆಸುತ್ತಾರೆ. ಭದ್ರತೆ ಮತ್ತು ಸೇನಾ ಸಹಕಾರ ಹಾಗೂ ವಾಣಿಜ್ಯ ವಹಿವಾಟುಗಳೇ ಇಲ್ಲಿ ಮುಖ್ಯ ವಿಷಯಗಳಾಗಿರುತ್ತವೆ. ಜಪಾನ್ ಮತ್ತು ಆಸ್ಟ್ರೇಲಿಯಾ ಜತೆ ಭಾರತ ಇಂತಹ ಮಾತುಕತೆ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics