ದೇಶ

'ಚಿನ್ನದ ಹುಡುಗಿ' ಹಿಮಾ ದಾಸ್ ದೇಶಭಕ್ತಿಗೆ ಮೂಕವಿಸ್ಮಿತರಾದ ಪ್ರಧಾನಿ ಮೋದಿ!

Sumana Upadhyaya

ನವದೆಹಲಿ: ಫಿನ್ ಲ್ಯಾಂಡ್ ನ ಟ್ಯಾಂಪಿಯರ್ ನಲ್ಲಿ ನಡೆದ ವಿಶ್ವ ಅಂಡರ್ -20 ಅಥ್ಲೆಟಿಕ್ಸ್ ಕೂಟದ ಮಹಿಳೆಯರ 400 ಮೀಟರ್ ಓಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಹಿಮಾ ದಾಸ್ ಪದಕ ಪ್ರದಾನದ ವೇಳೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರು ಸುರಿಸಿರುವ ವಿಡಿಯೊ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಇಂದು ಟ್ವೀಟ್ ಮಾಡಿದ್ದಾರೆ.

ಆ ಸಂದರ್ಭದ ವಿಡಿಯೊವನ್ನು ಶೇರ್ ಮಾಡಿರುವ ಪ್ರಧಾನಿ ಆಟಗಾರ್ತಿ ರಾಷ್ಟ್ರಗೀತೆ ಹಾಡುವಾಗ ಭಾವೋದ್ವೇಗಕ್ಕೆ ಒಳಗಾಗಿದ್ದು ತಮ್ಮ ಹೃದಯವನ್ನು ತಟ್ಟಿದೆ ಎಂದು ಹೇಳಿದ್ದಾರೆ.

ಹಿಮಾದಾಸ್ ಗೆಲುವು ಭಾರತಕ್ಕೆ ಒಂದು ಅವಿಸ್ಮರಣೀಯ ಗಳಿಗೆ. ಗೆದ್ದ ಕೂಡಲೇ ಆಕೆ ಭಾರತದ ತ್ರಿವರ್ಣ ಧ್ವಜಕ್ಕಾಗಿ ಹುಡುಕಾಟಿದ್ದು ಮತ್ತು ರಾಷ್ಟ್ರಗೀತೆ ಹಾಡುವಾಗ ಭಾವಪರವಶಳಾಗಿದ್ದು ಕಂಡು ನನ್ನ ಹೃದಯ ತಟ್ಟಿದೆ. ಈ ವಿಡಿಯೊವನ್ನು ನೋಡಿದ ಯಾವ ಭಾರತೀಯನಿಗೂ ಸಂತೋಷದ ಕಣ್ಣೀರು ಬರುವುದಿಲ್ಲ ಎಂದು ಬರೆದಿದ್ದಾರೆ.

ಈ ಮಧ್ಯೆ ತಮ್ಮ ಗೆಲುವಿಗೆ ಶುಭಹಾರೈಸಿದ ಪ್ರತಿಯೊಬ್ಬರಿಗೂ ಹಿಮಾ ದಾಸ್ ಕೃತಜ್ಞತೆ ಸಲ್ಲಿಸಿದ್ದಾರೆ, ಟ್ವೀಟ್ ಮೂಲಕ ವಿಡಿಯೊ ಮಾಡಿರುವ ಅವರು, ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕ್ರೀಡಾ ಸಚಿವರು, ಚಿತ್ರೋದ್ಯಮದ ಗಣ್ಯರು ಮತ್ತು ನನಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನಗೆ ಎಲ್ಲರೂ ಪ್ರೀತಿ, ಹಾರೈಕೆ ನೀಡಿದ್ದೀರಿ. ಅವರ ಹಾರೈಕೆಯಿಂದ ಇಂದು ನಾನು ಈ ಸ್ಥಾನಕ್ಕೆ ಬಂದಿದ್ದೇನೆ, ನಿಮ್ಮ ಹಾರೈಕೆಯನ್ನು ಶ್ರೀರಕ್ಷೆಯಾಗಿ ಪಡೆದುಕೊಂಡು ಭಾರತವನ್ನು ಮುನ್ನಡೆಸುತ್ತೇನೆ ಎಂದಿದ್ದಾರೆ.

ಹಿಮಾ ದಾಸ್ ನಿನ್ನೆ 400 ಮೀಟರ್ ಮಹಿಳೆಯರ ಅಂಡರ್ -20 ಓಟದಲ್ಲಿ 51.46 ಸೆಕೆಂಡ್ ಗಳಲ್ಲಿ ರೊಮಾನಿಯಾದ ಅಂಡ್ರೆ ಮಿಕ್ಲೋಸ್ ಮತ್ತು ಯುಎಸ್ಎಯ ಟೈಲರ್ ಮ್ಯಾನ್ಸನ್ ಅವರನ್ನು ಹಿಂದಿಕ್ಕಿದರು.

SCROLL FOR NEXT