ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲ(ವಿಚ್ಛೇದಿತ ಪತ್ನಿ ಮರುಮದುವೆ ನಿಯಮಗಳು) ಮಸೂದೆ ಪಾಸ್ ಮಾಡಲು ಸರ್ಕಾರದೊಂದಿಗೆ ಕೈಜೋಡಿಸುವಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಗೆ ಮಂಗಳವಾರ ಮನವಿ ಮಾಡಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ರವಿಶಂಕರ್ ಪ್ರಸಾದ್ ಅವರು, ಮಹಿಳಾ ಸಬಲಿಕರಣಕ್ಕಾಗಿ 'ಹೊಸ ಡೀಲ್'ಗೆ ನೆರವಾಗುವಂತೆ ಆಹ್ವಾನ ನೀಡಿದ್ದಾರೆ.
ಹೊಸ ಡೀಲ್ ನ ಭಾಗವಾಗಿ ಸಂಸತ್ತಿನ ಎರಡೂ ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಕ್ ನಿಷೇಧಿಸುವ ಕಾನೂನು ಮತ್ತು ನಿಖಾ ಹಲಾಲಾ ನಿಷೇಧಿಸುವ ಕಾನೂನಿಗೆ ಅನುಮೋದನೆ ಮತ್ತು ಹಿಂದೂಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆ ಕಲ್ಪಿಸಲು ಬಿಜೆಪಿ ಜತೆ ಕೈಜೋಡಿಸುವಂತೆ ರವಿಶಂಕರ್ ಪ್ರಸಾದ್ ಕೋರಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆ ಪಾಸ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದರು. ಪ್ರಧಾನಿಗೆ ರಾಹುಲ್ ಬರೆದ ಪತ್ರಕ್ಕೆ ಉತ್ತರವಾಗಿ ರವಿಂಶಕರ್ ಪ್ರಸಾದ್ ಅವರು ಈ ಪತ್ರ ಬರೆದಿದ್ದಾರೆ.
ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಈ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸುವಂತೆ ಮತ್ತು ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡುವುದಾಗಿ ರಾಹುಲ್ ಗಾಂಧಿ ನಿನ್ನೆ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.