ನವದೆಹಲಿ: ಪ್ರತಿಷ್ಠಿತ ರಾಜಕಾರಣಿಗಳನ್ನು ಒಳಗೊಂಡ ದೇಶದ ಕುಖ್ಯಾತ ಹಗರಣ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣದ ಕಿಂಗ್ ಪಿನ್ ಮದ್ಯವರ್ತಿ ಕ್ರಿಸ್ಟಿಯಾನ್ ಮೈಕಲ್ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕಳೆದ ವರ್ಷವೇ ಸಲ್ಲಿಸಿದ್ದಾಗಿ ಸಿಬಿಐ ಬುಧವಾರ ಹೇಳಿದೆ.
ಕ್ರಿಸ್ಟಿಯಾನ್ ಮೈಕಲ್ ಕುರಿತ ಎಲ್ಲಾ ದಾಖಲೆಗಳನ್ನು ಸಿಬಿಐ ಇದುವರೆಗೆ ಸಲ್ಲಿಸಿಲ್ಲ ಎಂದು ಇಟಲಿ ಮೂಲದ ವೃತ್ತಪತ್ರಿಕೆಯೊಂದು ಆರೋಪಿಸಿದ್ದ ಬೆನ್ನಲ್ಲೇ ಸಿಬಿಐ ಈ ಸ್ಪಷ್ಟನೆ ನೀಡಿದೆ.
"ಎಕ್ಸ್ಟ್ರಾಡಿಶನ್ ಪ್ರೊಸೀಡಿಂಗ್ಸ್ಎಲ್ಲವನ್ನೂ ಕಳೆದ ವರ್ಷವೇ ಪೂರ್ಣಗೊಳಿಸಲಾಗಿದೆ. ಆದರೆ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂದು ಭಾವಿಸಿರುವುದು ತಪ್ಪು"ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಮೂಲಗಳ ಪ್ರಕಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಾಗೂ ಸಿಬಿಐ ಹಿರಿಯ ಅಧಿಕಾರಿಗಳು ದುಬೈಗೆ ತೆರಳಿ ಕ್ರಿಸ್ಟಿಯಾನ್ ಮೈಕಲ್ ನನ್ನು ವಿಚಾರಣೆ ನಡೆಸಿದ್ದಾರೆ. ಅದಾಗ್ಯೂ ಸಿಬಿಐ ಮೈಕಲ್ ನನ್ನು ವಶಕ್ಕೆ ಪಡೆದ ಬಗೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಇದಕ್ಕೂ ಮುನ್ನ ದಿನದ ಪ್ರಾರಂಭದಲ್ಲಿ ಇಡಿ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿ ಪೂರಕ ಆರೋಪ ಪಟ್ಟಿಯನ್ನು ದಾಖಲಿಸಿತ್ತು.
ಈ ಆರೋಪ ಪಟ್ಟಿಯು ಜುಲೈ 20ರ ಶುಕ್ರವಾರ ನ್ಯಾಯಾಲಯದ ವಿಚಾರಣೆಗೆ ಬರಲಿದೆ.