ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್
ತಿರುವನಂತಪುರ: ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ ಎಂದು ಹೇಳಿಕೆ ನೀಡಿದ ತೀವ್ರ ಆಕ್ರೋಶಕ್ಕೆ ವ್ಯಕ್ತವಾದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆಯೊಂದನ್ನು ಬುಧವಾರ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ದ ತೀವ್ರವಾಗಿ ಕಿಡಿಕಾರಿರುವ ಶಶಿ ತರೂರ್, ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ತಾಲಿಬಾನ್ ಆರಂಭಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ನಾನು ಪಾಕಿಸ್ತಾನಕ್ಕೆ ಹೋಗಬೇಕೆಂದು ಹೇಳುತ್ತಿದ್ದಾರೆ. ಅವರಂತೆ ನಾನು ಹಿಂದೂ ಅಲ್ಲ ಎಂಬುದನ್ನು ನಿರ್ಧರಿಸುವ ಹಕ್ಕನ್ನು ಅವರಿಗೆ ಯಾರು ಕೊಟ್ಟರು? ನನಗೆ ನನ್ನ ದೇಶದಲ್ಲಿ ಉಳಿಯುವ ಹಕ್ಕಿಲ್ಲವೇ? ಎಂದು ಕೇಳಿದ್ದಾರೆ.
ಹಿಂದೂ ಪಾಕಿಸ್ತಾನ ಕುರಿತಂತೆ ಹೇಳಿಕೆ ನೀಡಿದ್ದ ಶಶಿ ತರೂರ್ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರಂತೆ ತಿರುವನಂತಪುರದಲ್ಲಿರುವ ತರೂರ್ ಅವರ ಕಚೇರಿ ಎದುರು ನಿನ್ನೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಪ್ಪು ಬಾವುಟ ಪ್ರದರ್ಶಿಸಿದ್ದರು. ಇದೇ ವೇಳೆ ತರೂರ್ ಪಾಕಿಸ್ತಾನಕ್ಕೆ ಹೋಗಲಿ ಎಂದು ಘೋಷಣೆ ಕೂಗಿದ್ದರು. ಇದಲ್ಲದೆ, ಕೆಲ ಕಾರ್ಯಕರ್ತರು ಕಚೇರಿ ಮೇಲೆ ದಾಳಿ ನಡೆಸಿ ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದರು.