ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ
ನವದೆಹಲಿ: ತೆರಿಗೆ ತಪ್ಪಿಸುವುದಲ್ಲದೆ ಕಾನೂನು ಹಿಡಿತದಿಂದ ಪಾರಾಗುವ ಸಲುವಾಗಿ ರಾಷ್ಟ್ರವನ್ನು ತೊರೆಯುವ ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಜರುಗಿಸುವ ಉದ್ದೇಶದಿಂದ ರೂಪಿಸಲಾಗಿರುವ ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಮಸೂದೆಯನ್ನು ಲೋಕಸಭೆಯು ಧ್ವನಿಮತದಿಂದ ಅಂಗೀಕರಿಸಿದ ಬಳಿಕ ಮಾತನಾಡಿದ ಹಣಕಾಸು ಸಚಿವ ಪಿಯೂಷ್ ಗೋಯಲ್ ಸರ್ಕಾರವು ಮಸೂದೆಯನ್ನು ಸಂಸತ್ತಿಗೆ ಪರಿಚಯಿಸುವುದಕ್ಕೆ ಮುನ್ನವೇ ಈ ಕುರಿತಂತೆ ಕಾನೂನು ಜಾರಿಗೊಳಿಸಿದೆ. ಇದರಿಂದಾಗಿ ಸರ್ಕಾರ ಕಪ್ಪು ಹಣ ಹಾಗೂ ಇಂತಹಾ ಭ್ರಷ್ಠ ಅಪರಾಧಿಗಳ ಕುರಿತಂತೆ ಎಷ್ಟು ಆಕ್ರಮಣಕಾರಿ ನಿಲುವು ಹೊಂದಿದೆ ಎನ್ನುವುದು ಸ್ಪಷ್ಟವಾಗಲಿದೆ ಎಂದರು.
ಯುಪಿಎ ಸರ್ಕಾರವೇ ಏಕೆ ಇಂತಹಾ ಶಾಸನವನ್ನು ಜಾರಿಗೆ ತಂದಿರಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ದೇಶಭ್ರಷ್ಠ ಆರ್ಥಿಕ ಅಪರಾಧಿಗಳ ಮಸೂದೆ 2013 ಇಂತಹಾ ಅಪರಾಧಿಗಳ ಹೆಸರಿನಲ್ಲಿರುವ ಆಸ್ತಿಗಳನ್ನಲ್ಲದೆ ಬೇನಾಮಿ ಆಸ್ತಿಗಳನ್ನು ಸಹ ಮುತ್ತುಗೋಲು ಹಾಕಿಕೊಳ್ಳುವ ಅಧಿಕಾರವನ್ನು ತನಿಖಾ ಏಜನ್ಸಿಗಳಿಗೆ ನಿಡಲಿದೆ. ಇದಾಗಲೇ ದೇಶ ತೊರೆದಿರುವವರನ್ನು ಬಂಧಿಸಲು ಈ ಮಸೂದೆ ಅಡಿಯಲ್ಲಿ ಸಾಧ್ಯವಾಗದೆ ಹೋದರೂ ಸರ್ಕಾರಕ್ಕೆ ಆರೋಪಿಗಳನ್ನು ಹೇಗೆ ಬಂಧಿಸಬೇಕೆಂದು ತಿಳಿದಿದೆ ಎಂದು ಗೋಯಲ್ ಹೇಳಿದ್ದಾರೆ.
ಇದೇ ವೇಳೆ ವಿರೋಧ ಪಕ್ಷಗಳು ಸರ್ಕಾರವು ಇಂತಹಾ ದೇಶಭ್ರಷ್ಠರ ವಿರುದ್ಧ ಕ್ರಮ ಜರುಗಿಸುವಲ್ಲಿ ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿರಲಿದೆ ಎಂದು ಪ್ರಶ್ನಿಸಿದೆ
ಮಸೂದೆ ಅಂಗೀಕಾರಕ್ಕೆ ಮುನ್ನ ಸಂಸತ್ತಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆದಿದ್ದು ಪ್ರತಿಪಕ್ಷಗಳು ಸರ್ಕಾರದ ’ಪ್ರಾಮಾಣಿಕತೆ’ಯನ್ನು ಪ್ರಶ್ನಿಸಿದೆ. ಆರ್ ಎಸ್ ಪಿದಸ್ಯ ಎನ್. ಕೆ. ಪ್ರೇಮಚಂದ್ರನ್ ಸೇರಿ ಅನೇಕ ಪ್ರತಿಪಕ್ಷ ಸದಸ್ಯರು ವಿಜಯ್ ಮಲ್ಯ, ನೀರವ್ ಮೋದಿ, ಮತ್ತು ಮೆಹುಲ್ ಚೋಕ್ಸಿ ಮುಂತಾದ ಭ್ರಷ್ಠರನ್ನು ಬಿಜೆಪಿ ತನ್ನ ಆಳ್ವಿಕೆಯಲ್ಲಿಯೇ ದೇಶ ತೊರೆಯಲು ಅವಕಾಶ ನಿಡಿದೆ ಎಂದು ಆರೋಪಿಸಿದ್ದಾರೆ.
ಆದರೆ ಬಿಜೆಪಿಯ ನಿಶಿಕಾಂತ್ ದುಬೆ ಸೇರಿದಂತೆ ಹಲವು ಸಂಸದರು ಮಸೂದೆಯನ್ನು ಹಾಗೂ ಸರ್ಕಾರದ ನಿಲುವನ್ನು ಬಲವಾಗಿ ಬೆಂಬಲಿಸಿದ್ದರು.ಮಲ್ಯ, ಮೋದಿ, ಚೋಕ್ಸಿಗಳೆಲ್ಲರೂ ಕಾಂಗ್ರೆಸ್ ಸರ್ಕಾರದ ಸೃಷ್ಟಿ ಎಂದು ಅವರು ಪ್ರತಿಪಾದಿಸಿದ್ದರು