ದೇಶ

ಲೆಕ್ಕದಲ್ಲಿ ಸೋನಿಯಾ ಗಾಂಧಿ ತುಂಬಾ ವೀಕು: ಅವಿಶ್ವಾಸ ನಿರ್ಣಯ ಕುರಿತು ಅನಂತ್ ಕುಮಾರ್ ಲೇವಡಿ

Manjula VN
ನವದೆಹಲಿ: ಗಣಿತ ವಿಷಯದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಹಳ ವೀಕು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಗುರುವಾರ ಲೇವಡಿ ಮಾಡಿದ್ದಾರೆ. 
ಅವಿಶ್ವಾಸ ನಿರ್ಣಯ ಮಂಡನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವ ಎನ್'ಡಿಎ ಸರ್ಕಾರದ ಬಳಿ ಸಂಖ್ಯಾಬಲವಿದೆ. ಬಹುಮತ ಕೂಡ ಇದೆ. ಸಂಸತ್ತಿನ ಹೊರಗೆ ಮತ್ತು ಒಳಗೆ ಎರಡೂ ಕಡೆ ನಮಗೆ ಬಹುಮತವಿದೆ. ಕೇಂದ್ರದ ವಿರುದ್ದ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಲಾಗಿದೆ. ಎನ್'ಡಿಎ ಪಕ್ಷದ ಇತರೆ ಮೈತ್ರಿ ಪಕ್ಷಗಳು ನಮಗೆ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. 
ಸೋನಿಯಾ ಗಾಂಧಿಯವರ ಲೆಕ್ಕ ತಪ್ಪಾಗಿದೆ. 1996ರಲ್ಲಿ ಹಾಕಲಾಗಿದ್ದ ಲೆಕ್ಕವನ್ನೇ ಈಗಲೂ ಮಾಡುತ್ತಿದ್ದಾರೆ. ಅಂದು ಏನಾಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಇಂದೂ ಕೂಡ ಸೋನಿಯಾ ಅವರ ಲೆಕ್ಕ ಮತ್ತೆ ತಪ್ಪಾಗಲಿದೆ ಎಂದು ತಿಳಿಸಿದ್ದಾರೆ. 
ಸಂಸತ್ತು ಮುಂಗಾರು ಅಧಿವೇಶನ ಜು.18ರಿಂದ ಆರಂಭವಾಗಿದ್ದು, ಆಗಸ್ಟ್ 10ವರೆಗೂ ನಡೆಯಲಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ನಿನ್ನೆಯಷ್ಟೇ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು. ವಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಂಗೀಕರಿಸಿದ್ದರು. ಅಲ್ಲದೆ, ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಚರ್ಚೆಯನ್ನು ಜುಲೈ.20 ರಂದು ಲೋಕಸಭೆಯಲ್ಲಿ, ಜು.23 ರಂದು ರಾಜ್ಯಸಭೆಯಲ್ಲಿ ನಡೆಸುವುದಾಗಿ ತಿಳಿಸಿದ್ದರು. 
SCROLL FOR NEXT