ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಚೌಕಿದಾರ ಅಲ್ಲ, ಭ್ರಷ್ಟತೆಯ ಭಾಗೀದಾರ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಆರೋಪಿಸಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡನೆ ಕುರಿತಂತೆ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿರುವ ರಾಹುಲ್ ಗಾಂಧಿಯವರು, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ರಫೇಲ್ ಯುದ್ಧ ವಿಮಾನ ಕುರಿತಂತೆ ಆಡಳಿತಾರೂಢ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿಯವರು, ರಫೇನ್ ವಿಮಾನ ಖರೀದಿ ಒಪ್ಪಂದ ಯುಪಿಎ ಅವಧಿಯಲ್ಲಿ ರೂ.520 ಕೋಟಿಗೆ ನೀಡಲಾಗಿತ್ತು. ಆದರೆ, ಮೋದಿ ಫ್ರಾನ್ಸ್'ಗೆ ಹೋಗಿ ಬಂದ ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ. ರಫೇಲ್ ವಿಮಾನದ ಬೆಲೆಯನ್ನು ರೂ.1,600 ಕೋಟಿಗೆ ನಿಗದಿಪಡಿಸಲಾಯಿತು. ರಫೇಲ್ ಒಪ್ಪಂದ ಕುರಿತಂತೆ ರಕ್ಷಣಾ ಸಚಿವರು ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆ, ಮೋದಿ ಸೂಚನೆ ಮೇರೆಗೆ ಸುಳ್ಳು ಹೇಳುತ್ತಿದ್ದಾರೆ. ಗೌಪ್ಯತೆ ನಿಯಮದಡಿ ಒಪ್ಪಂದಗಳ ಕುರಿತ ಮಾಹಿತಿಗಳನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ, ನಾನು ಫ್ರಾನ್ಸ್ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದಾಗ, ಇಂತಹ ಯಾವುದೇ ರಹಸ್ಯ ಒಪ್ಪಂದಗಳಾಗಿಲ್ಲ ಎಂದು ಹೇಳಿದ್ದಾರೆ.
ಒಬ್ಬ ದೊಡ್ಡ ವ್ಯಕ್ತಿಗೆ ರಫೇಲ್ ಗುತ್ತಿಗೆ ನೀಡಲಾಗಿದೆ. ಆ ಜಂಟಲ್'ಮನ್'ಗೆ ರೂ.45 ಸಾವಿರ ಕೋಟಿ ಲಾಭವಾಗಿದೆ. ಮೋದಿಯವರು ನಗುತ್ತಿರುವುದು ಕಾಣುತ್ತಿದೆ. ಆದರೆ, ಅವರು ಒಳಗೊಳಗೆ ಭಯ ಕೂಡ ಪಡುತ್ತಿದ್ದಾರೆ. ಮೋದಿಯವರಿಗೆ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ. ಮೋದಿ ಸತ್ಯಕ್ಕೆ ಸೂಕ್ತ ವ್ಯಕ್ತಿಯಲ್ಲ, ಅದು ನನಗೆ ಕಾಣುತ್ತಿದೆ ಎಂದು ಹೇಳಿದರು. ಇದಕ್ಕೆ ತೀವ್ರ ಆಕ್ಷೇಪ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಭಾಷಣದ ಬಗ್ಗೆ ಆಕ್ಷೇಪ ಎತ್ತಿದ ಸಂಸದ ಅನಂತ್ ಕುಮಾರ್ ಅವರು, 353 ನಿಯಮದ ಪ್ರಕಾರ ಮುಂಚಿತವಾಗಿ ಅನಮತಿ ಇಲ್ಲದೆ, ಮೋದಿ ವಿರುದ್ಧ ವಾಕ್ಸಮರ ನಡೆಸಲಾಗುತ್ತಿದೆ. ಮೋದಿ ವಿರುದ್ಧ ಆರೋಪ ಮಾಡುತ್ತಿರುವ ರಾಹುಲ್, ಆರೋಪಗಳಿಗೆ ಸಾಕ್ಷ್ಯಧಾರ ನೀಡಲಿ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಮಧ್ಯಾಹ್ನ 1.45ಕ್ಕೆ ಮುಂದೂಡಿದರು.
21ನೇ ಶತಮಾನದ ರಾಜಕೀಯದ ಬಲಿಪಶು ಆಂಧ್ರಪ್ರದೇಶ
ಲೋಕಸಭೆಯಲ್ಲಿ ಗಲ್ಲಾ ಜಯದೇವ್ ಭಾಷಣವನ್ನು ಉಲ್ಲೇಖಿಸಿ ಭಾಷಣ ಮಾಡಿದ ರಾಹುಲ್ ಗಾಂಧಿಯವರು 21ನೇ ಶತಮಾನದ ರಾಜಕೀಯ ಬಲಿಪಶು ಆಂಧ್ರಪ್ರದೇಶ. ನೀವು ಸರ್ಕಾರದ ಸುಳ್ಳುಗಳಿಗೆ ಬಲಿಪಶುಗಳಾಗಿದ್ದೀರಿ. ದೇಶದ ರೈತರು ದಲಿತರು, ಆದಿವಾಸಿಗಳು, ಮಹಿಳೆಯರು ಬಲಿಪಶುಗಳಾಗಿದ್ದಾರೆ. ಆಂಧ್ರಪ್ರದೇಶ ರಾಜ್ಯ ಷಡ್ಯಂತ್ರಗಳಿಗೆ ಬಲಿಯಾಗುತ್ತಿದೆ ಎಂದು ಹೇಳಿದರು.
ದೇಶದ ಜನತೆಗೆ ಮೋದಿ ಸರ್ಕಾರ ಎರಡು ದೊಡ್ಡ ಸುಳ್ಳುಗಳನ್ನು ಹೇಳಿದೆ. ಮೊದಲ ಸುಳ್ಳು ಎಲ್ಲರ ಅಕೌಂಟ್'ಗೆ ರೂ.15 ಲಕ್ಷ ಹಾಕುತ್ತೇನೆಂದು ಹೇಳಿರುವುದು, 2ನೇ ಸುಳ್ಳು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿರುವುದು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಸರ್ಕಾರ ವರ್ಷಕ್ಕೆ ಕೇವಲ 4 ಲಕ್ಷ ಉದ್ಯೋಗ ಸೃಷ್ಟಿಮಾಡುತ್ತಿದೆ. ಕೆಲವೊಮ್ಮೆ ಪಕೋಡ ಮಾರಿ ಎಂದು ಹೇಳುತ್ತಾರೆ, ಇನ್ನು ಕೆಲವೊಮ್ಮೆ ಅಂಗಡಿ ತೆರೆಯುವಂತೆ ಹೇಳುತ್ತಾರೆ.
ಜಿಎಸ್ ಟಿ ಕಾಂಗ್ರೆಸ್ ಜಾರಿಗೆ ತರಲು ಉದ್ದೇಶಿಸಿತ್ತು. ಆದರೆ, ಅಂದು ಅದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಮೋದಿಯವರು ಗುಜರಾತ್ ರಾಜ್ಯ ಮುಖ್ಯಮಂತ್ರಿಯಾಗಿದ್ದಾಗ ವಿರೋಧ ವ್ಯಕ್ತಪಡಿಸಿದ್ದರು. ದೇಶದಲ್ಲಿ ಏಕರೂಪ ತೆರಿಗೆ ಜಾರಿ ತರುವ ಉದ್ದೇಶದಿಂದ ಜಿಎಸ್''ಟಿ ಇರಬೇಕೆಂದು ಬಯಸಿದ್ದೆವು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ರಾತ್ರಿ 8 ಗಂಟೆಗೆ ಮೋದಿ ನೋಟು ಬ್ಯಾನ್ ಮಾಡಿದ್ದರು. ನೋಟು ನಿಷೇಧ ಮಾಡುವ ಸಂದೇಶ ಪ್ರಧಾನಿ ಮೋದಿಯವರಿಗೆ ಎಲ್ಲಿಂದ ಸಿಕ್ಕಿತ್ತು. ಬಡವರ ಹೃದಯಲ್ಲಿ ಇಂದು ಪ್ರಧಾನಿ ಮೋದಿಗೆ ಜಾಗವಿಲ್ಲ. ನೋಟು ನಿಷೇಧ ಮಾಡುವ ಮೂಲಕ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರ ಹಣವನ್ನು ಕಸಿದುಕೊಂಡಿದ್ದಾರೆ. ಮೋಜಿ ಜಾರಿಗೆ ತಂದ ಜಿಎಸ್'ಟಿ ಯಿಂದ ಬಹಳಷ್ಟು ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆಂದು ಹೇಳಿದರು.
ಮಾತಿನ ಭರದಲ್ಲಿ ಪೇಚಿಗೆ ಸಿಲುಕಿದ ರಾಹುಲ್
ಇದೇ ವೇಳೆ ಮಾತಿನ ಭರದಲ್ಲಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ ಹೊರಗೆ ಹೋಗುವುದೇ ಇಲ್ಲ ಎಂದು ಹೇಳಿದರು. ನಂತರ ಕೆಲವೇ ಕ್ಷಣಗಳಲ್ಲಿ ಇಲ್ಲ...ಇಲ್ಲಾ.. ಹೊರಗಡೆ ಹೋಗುತ್ತಾರೆ, ವಿದೇಶಗಳಿಗೆ ತೆರಳುತ್ತಾರೆಂದು ಹೇಳಿದರು. ಈ ವೇಳೆ ಸದನದಲ್ಲಿದ್ದ ಬಿಜೆಪಿ ಸಂಸದರು ರಾಹುಲ್ ಗಾಂಧಿಯವರ ಮಾತುಗಳನ್ನು ಕೇಳಿ ನಕ್ಕರು.
ಬೆಂಗಳೂರಿನಿಂದ ವಿಮಾನ ತಯಾರಿಕೆ ಪ್ರಾಜೆಕ್ಟ್ ವಾಪಸ್ ಪಡೆದಿದ್ದೇಕೆ?
ರಫೇಲ್ ಉತ್ಪಾದನಾ ಒಪ್ಪಂದ ರದ್ದು ಮಾಡಿರುವುದರ ಕುರಿತಂತೆ ಕೇಂದ್ರ ವಿರುದ್ಧ ತೀವ್ರವಾಗಿ ಕಿಡಿಕಾರಿದ ರಾಹುಲ್ ಗಾಂಧಿಯವರು, ಬೆಂಗಳೂರಿನಿಂದ ವಿಮಾನ ತಯಾರಿಕೆ ಪ್ರಾಜೆಕ್ಟ್ ವಾಪಸ್ ಪಡೆದಿದ್ದೇಕೆ? ಬೆಂಗಳೂರಿನ ಹೆಚ್ಎಎಲ್'ಗೆ ಗುತ್ತಿಗೆ ಸಿಕ್ಕಿಲ್ಲ. ಪ್ರಾಜೆಕ್ಟ್ ವಾಪಸ್ ಪಡೆಯುವ ಮೂಲಕ ಕರ್ನಾಟಕದ ಯುವಜನತೆಯ ಉದ್ಯೋಗವನ್ನು ಕಸಿದುಕೊಂಡಿದ್ದೇಕೆ ಎಂದು ಪ್ರಶ್ನಿಸಿದರು.
ಬಳಿಕ ಸರ್ಕಾರದ ವಿದೇಶಿ ನೀತಿಗಳ ಕುರಿತಂತೆ ಮಾತನಾಡಿದ ರಾಹುಲ್ ಅವರು, ಚೀನಾ ಪ್ರಧಾನಮಂತ್ರಿಗಳೊಂದಿಗೆ ಪ್ರಧಾನುಮಂತ್ರಿ ನರೇಂದ್ರ ಮೋದಿಯವರು ಜೋಕಾಲಿ ಆಡುತ್ತಿದ್ದ ಸಂದರ್ಭದಲ್ಲಿ ಸಾವಿರಾರು ಚೀನಾ ಸೈನಿಕರು ಭಾರತದ ಗಡಿ ಪ್ರವೇಶಿಸಿದ್ದರು. ಚೀನಾ ಸೈನಿಕರು ಡೋಕ್ಲಾಂ ಗಡಿ ನುಸುಳಿಸಿದ್ದರು. ಆದರೆ, ಚೀನಾದಲ್ಲಿಯೇ ಇದ್ದರೂ ಮೋದಿ ಈ ಬಗ್ಗೆ ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲೇ ಇಲ್ಲ. ಯಾವುದೇ ಅಜೆಂಡಾಗಳಿಲ್ಲದೆ ಮೋದಿ ಚೀನಾಗೆ ತೆರಳಿದ್ದರು. ಸೈನಿಕರಿಗೆ ಮೋದಿ ಮೋಸ ಮಾಡಿದ್ದಾರೆಂದು ತಿಳಿಸಿದರು.