ದೇಶ

ಪ್ರಧಾನಿ ಕುರ್ಚಿ ಬಿಟ್ಟರೆ ರಾಹುಲ್ ಗಾಂಧಿಗೆ ಬೇರೇನೂ ಕಾಣೋಲ್ಲ: ಪ್ರಧಾನಿ ಮೋದಿ

Manjula VN
ಶಹಜಾನ್ ಪುರ: ಅವಿಶ್ವಾಸ ನಿರ್ಣಯ ಕುರಿತಂತೆ ಲೋಕಸಭೆಯಲ್ಲಿ ತಮನ್ನು ಅಪ್ಪಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪ್ರಧಾನಮಂತ್ರಿಗಳ ಕುರ್ಚಿ ಬಿಟ್ಟರೆ, ರಾಹುಲ್ ಗಾಂಧಿಗೆ ಬೇರೇನೂ ಕಾಣುವುದಿಲ್ಲ ಎಂದು ಶನಿವಾರ ಹೇಳಿದ್ದಾರೆ. 
ಉತ್ತರಪ್ರದೇಶದ ಶಹಜಾನ್ ಪುರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಜನತೆಯನ್ನುದ್ದೇಶಿ ಮಾತನಾಡಿರುವ ಮೋದಿಯವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಲ್ಲವೇಕೆ ಎಂದು ವಿರೋಧ ಪಕ್ಷಗಳನ್ನು ನಾವು ಪ್ರಶ್ನೆ ಮಾಡಿದಾಗ ಅವರಿಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಕೊನೆಗೆ ಪ್ರಧಾನಮಂತ್ರಿಗಳ ಕುರ್ಚಿಗೆ ಬಂದು ಹಸ್ತಲಾಘವಾ ಮಾಡಿ ಆಲಿಂಗನ ಮಾಡಿದರು ಎಂದು ಹೇಳಿದ್ದಾರೆ. 
ಬಳಿಕ 2014ರಿಂದ ರೈತರ ಕಲ್ಯಾಣಕ್ಕಾಗಿ ಎನ್'ಡಿಎ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಪಟ್ಟಿ ಮಾಡಿದ ಅವರು, ವಿರೋಧ ಪಕ್ಷಗಳ ಮೊಸಳೆ ಕಣ್ಣೀರಿನ ವಿರುದ್ಧ ಕಿಡಿಕಾರಿದ್ದಾರೆ. 
ಅಧಿಕಾರದಲ್ಲಿರುವ ನನ್ನ ಸರ್ಕಾರ ಜನರ ವಿಶ್ವಾಸವನ್ನು ಗೆದ್ದಿದೆ. ಅಭಿವೃದ್ಧಿ ಕಾರ್ಯಗಳನ್ನು ಸುದೀರ್ಘವಾಗಿ ನಡೆಸುತ್ತಲೇ ಇದ್ದೇವೆ. ಯಾವುದೇ ತಪ್ಪುಗಳನ್ನು ಮಾಡದೇ ಇರುವುದು, ಸರಿ ಹಾದಿಯಲ್ಲಿ ನಡೆಯುತ್ತಿರುವುದು ನಾನು ಮಾಡಿದ ದೊಡ್ಡ ಅಪರಾಧ. 
ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಗಳ ಕುರ್ಚಿಯತ್ತ ಹೇಗೆ ಓಡಿ ಬಂದರು ಎಂಬುದನ್ನು ನೀವೆಲ್ಲಾ ನೋಡಿದ್ದೀರಲ್ಲಾ, ಅವರಿಗೆ ಪ್ರಧಾನಮಂತ್ರಿಗಳ ಕುರ್ಚಿ ಬಿಟ್ಟರೆ ಬೇರೇನೂ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ. 
2019ರ ವೇಳೆ ದೇಶದಲ್ಲಿರುವ ಎಲ್ಲಾ ಮನೆಗಳಿಗೂ ವಿದ್ಯುತ್ ನೀಡುವ ಕುರಿತು ನಾವು ಪ್ರತಿಜ್ಞೆ ಮಾಡಿದ್ದೇವೆ. ಕಾರಣಗಳಿಲ್ಲದೆಯೇ ಅವಿಶ್ವಾಸ ನಿರ್ಣಯ ಮಂಡನೆಯಾಗಿಲ್ಲ. ಶ್ರಮವಿಲ್ಲದೆ ಆರಾಮದಾಯಕವಾಗಿ ಹಣವನ್ನು ಗಳಿಸಿದವರ ಲೋಪದೋಷಗಳನ್ನು ಬಹಿರಂಗಪಡಿಸಿದ್ದೇವೆ. ಹೀಗಾಗಿಯೇ ಅವರು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಆದರೆ, ಜನರ ನಂಬಿಕೆ ನಾವು ಗೆಲ್ಲುವಂತೆ ಮಾಡಿತು.
ರೈತರಿಗೆ ಸಹಾಯ ಮಾಡುವ ಅವಕಾಶಗಳು ಸದಾಕಾಲ ಇದ್ದೇ ಇರುತ್ತವೆ. ಅದನ್ನು ಜಾರಿಗೆ ತರುವುದು ಮುಖ್ಯವಾಗಿರುತ್ತೆ. ಸಕ್ಕರೆ ಮೇಲಿನ ಎಂಎಸ್'ಪಿ (ಕನಿಷ್ಟ ಬೆಂಬಲ ಬೆಲೆ) ರೈತರಿಗೆ ಶೇ.80ರಷ್ಟು ಲಾಭವನ್ನು ನೀಡಲಿದೆ. ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಹಾಕುತ್ತಿರುವವವರು ಅಧಿಕಾರದಲ್ಲಿದ್ದಾಗ ರೈತರಿಗಾಗಿ ಏನನ್ನೂ ಮಾಡಲಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT