ದೇಶ

ನಕಲಿ ಸುದ್ದಿ ಕಡಿವಾಣ ಹಾಕಿ ನೇರ ಮಾಹಿತಿ ನೀಡಲು ದೆಹಲಿ ಬಿಜೆಪಿಯಿಂದ ವಾಟ್ಸಾಪ್ ಗ್ರೂಪ್ ರಚನೆ; ಅಮಿತ್ ಶಾ ಅದರಲ್ಲಿ ಸದಸ್ಯ

Sumana Upadhyaya

ನವದೆಹಲಿ: ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಈಗಲೇ ವೇದಿಕೆ ಸಜ್ಜುಗೊಳ್ಳುತ್ತಿದೆ. ಇಂದು ಯಾವುದೇ ಮಾಹಿತಿಗೆ ಜನರು ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮವನ್ನು ನೆಚ್ಚಿಕೊಂಡಿರುವ ಸಂದರ್ಭದಲ್ಲಿ ಬಿಜೆಪಿ ಚುನಾವಣೆಯ ಹೊಸ್ತಿಲಿನಲ್ಲಿ ನೂರಾರು ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಿದೆ.

ದೆಹಲಿಯ ಬಿಜೆಪಿ ಘಟಕ ನೂರಾರು ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಿದ್ದು ಅವುಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಪ್ರತಿ ಗ್ರೂಪ್ ನ ಸದಸ್ಯರನ್ನಾಗಿ ಮಾಡಲಾಗಿದೆ. ಜನರಿಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಬಗ್ಗೆ ನೇರ ಮಾಹಿತಿ ಒದಗಿಸುವುದು ಹಾಗೂ ನಕಲಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ದೆಹಲಿ ಘಟಕದ ನಾಯಕರು ಮಂಡಲ ತಳಮಟ್ಟದವರೆಗೆ ತಂಡಗಳನ್ನು ಪರಿಷ್ಕರಿಸುತ್ತಿದ್ದು, ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ವೇದಿಕೆಯಡಿ ತರಲಾಗುತ್ತದೆ.

ಪ್ರತಿ ವಾಟ್ಸಾಪ್ ಗ್ರೂಪ್ ನಲ್ಲಿ ಅಮಿತ್ ಶಾ ಅವರ ಸಂಪರ್ಕ ಸಂಖ್ಯೆ ಮತ್ತು ದೆಹಲಿಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಯವರ ಸಂಖ್ಯೆಯಿರುತ್ತದೆ ಎಂದು ದೆಹಲಿ ಬಿಜೆಪಿ ಘಟಕದ ಸಾಮಾಜಿಕ ಮಾಧ್ಯಮ ಘಟಕದ ಸಹ ಮುಖ್ಯಸ್ಥ ನೀಲಕಂಠ ಬಕ್ಷಿ ತಿಳಿಸಿದರು.

ಕಳೆದ ತಿಂಗಳು ಸಭೆಯೊಂದರಲ್ಲಿ ಅಮಿತ್ ಶಾ, ಸಾಮಾಜಿಕ ಮಾಧ್ಯಮ ಕಾರ್ಯಕರ್ತರಿಗೆ ಮತ್ತು ಪಕ್ಷದ ನಾಯಕರಿಗೆ ನಕಲಿ ಸುದ್ದಿ ಹಬ್ಬಿಸದಂತೆ ಮತ್ತು ತಪ್ಪು ಸಂದೇಶಗಳನ್ನು ರವಾನಿಸದಂತೆ ಎಚ್ಚರಿಕೆ ನೀಡಿದ್ದರು. ನಕಲಿ ಸುದ್ದಿ ಹಬ್ಬಿಸಿದರೆ ಪಕ್ಷದ ಮೇಲಿನ ವಿಶ್ವಾಸಾರ್ಹತೆ, ನಂಬಿಕೆಗಳಿಗೆ ಧಕ್ಕೆಯುಂಟಾಗುತ್ತದೆ ಎಂದಿದ್ದರು.

ದೆಹಲಿಯ ಬಿಜೆಪಿ ಘಟಕ ರಚಿಸಿರುವ ವಾಟ್ಸಾಪ್ ಗ್ರೂಪ್ ಗಳಲ್ಲಿ ಪಕ್ಷದ ನಿರ್ದೇಶನಗಳು, ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಕೈಗೊಂಡಿರುವ ಕಾರ್ಯಕ್ರಮಗಳನ್ನು ಪೋಸ್ಟ್ ಮಾಡಲಾಗುತ್ತದೆ ಎಂದು ನೀಲಕಂಠ ಬಕ್ಷಿ ತಿಳಿಸಿದರು.

ಅಲ್ಲದೆ ಸಾಮಾಜಿಕ ಮಾಧ್ಯಮ ಸಭೆಗಳನ್ನು ಜಿಲ್ಲಾ ಮತ್ತು ಮಂಡಳ ಮಟ್ಟಗಳಲ್ಲಿ ನಡೆಸಲು ಪಕ್ಷ ಯೋಜಿಸಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ ಡಿಎ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಬಿಜೆಪಿ ಉದ್ದೇಶವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾಹಿತಿ ಮತ್ತು ಸುದ್ದಿಗಳಿಗೆ ಪತ್ರಿಕೆ ಮತ್ತು ಟಿವಿ ವಾಹಿನಿಗಳನ್ನು ಹೆಚ್ಚಾಗಿ ನಂಬದೆ ಸಾಮಾಜಿಕ ಮಾಧ್ಯಮಗಳನ್ನು ನಂಬಿಕೊಂಡಿರುವ ಯುವ ಜನತೆಯನ್ನು ಹೆಚ್ಚು ತಲುಪುವುದು ಬಿಜೆಪಿ ಉದ್ದೇಶವಾಗಿದೆ.

SCROLL FOR NEXT