ನವದೆಹಲಿ: ಗೋ ಸಂರಕ್ಷಣೆ ಹೆಸರಲ್ಲಿ ಅಮಾಯಕರ ಮೇಲೆ ನಡೆಸಲಾಗುತ್ತಿರುವ ದಾಳಿಗಳಿಗೆ ಕೇಂದ್ರ ಸರ್ಕಾರವೇ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದು ಸಂಸತ್ ಅಧಿವೇಶನಕ್ಕೆ ತೆರಳುವ ಮುನ್ನ ಸಂಸತ್ ಭವನದ ಎದುರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಗೋ ಸಂರಕ್ಷಣೆ ಹೆಸರಲ್ಲಿ ರಾಜಸ್ಥಾನದಲ್ಲಿ ನಡೆದ ಸಾಮೂಹಿಕ ಹಲ್ಲೆ ಮತ್ತು ಸಾವು ಪ್ರಕರಣ ನಿಜಕ್ಕೂ ಖಂಡನಾರ್ಹ. ವಿಪರ್ಯಾಸವೆಂದರೆ ಇಂತಹ ಕೃತ್ಯಗಳಿಗೆ ಕೇಂದ್ರ ಸರ್ಕಾರವೇ ಬೆಂಬಲ ನೀಡುತ್ತಿದೆ. ಹೀಗಾಗಿ ದೇಶದಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಅಂತೆಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಸಂಸತ್ ಕಲಾಪದಲ್ಲಿ ಧ್ವನಿ ಎತ್ತುತ್ತೇವೆ. ಖಂಡಿತಾ ಕೇಂದ್ರ ಸರ್ಕಾರ ಈ ಕುರಿತು ಕಠಿಣ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇತ್ತೀಚೆಗಷ್ಟೇ ರಾಜಸ್ಛಾನದ ಆಳ್ವಾರ್ ನಲ್ಲಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದಾನೆ ಎಂದು ಆರೋಪಿಸಿ ಗೋ ಸಂರಕ್ಷಕರ ಸೋಗಿನಲ್ಲಿದ್ದ ಕೆಲವ ವ್ಯಕ್ತಿಗಳು ರಕ್ಬರ್ ಎಂಬಾತನ ಮೇಲೆ ಸಾಮೂಹಿಕ ಹಲ್ಲೆ ಮಾಡಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡ ಆತನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದ.