ನವದೆಹಲಿ: ರಾಫೆಲ್ ಜೆಟ್ ಖರೀದಿ ಪ್ರಕರಣದಲ್ಲಿ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನಕಲಿ ರಾಫೆಲ್ ವಿವಾದ ಸೃಷ್ಟಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ರಾಫೆಲ್ ಒಪ್ಪಂದ ಎರಡು ಸರ್ಕಾರಗಳ ನಡುವೆ ನಡೆದಿರುವ ಒಪ್ಪಂದವಾಗಿದ್ದು ರಾಹುಲ್ ಗಾಂಧಿ ಆರೋಪದಲ್ಲಿ ಹುರುಳಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ರಾಜಕೀಯ ವಿಷಯವಾಗಿಯೂ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದು, ಯಾವುದೇ ವಿಷಯವೂ ಸಿಗದೇ ಕಾಂಗ್ರೆಸ್ ಪಕ್ಷ ದೇಶದ ಬಹುಸಂಖ್ಯಾತರ ಮೇಲಿನ ದಾಳಿ, ಆರೋಪ ಮಾಡುವುದಕ್ಕೆ ಸೆಕ್ಯುಲರಿಸಂ (ಜಾತ್ಯಾತೀತತೆಯ) ಎಂಬ ಸೌಮ್ಯೋಕ್ತಿಯನ್ನು ಬಳಕೆ ಮಾಡುತ್ತಿದೆ ಎಂದು ಜೇಟ್ಲಿ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಎದುರಾಳಿಯ ನಡುವಿನ ಅಂತರ ದೊಡ್ಡದಿದೆ. ಲೋಕಸಭೆಯ ಶೇ.50 ರಷ್ಟು ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ 3-4 ನೇ ಸ್ಥಾನದಲ್ಲಿದ್ದು ಕೇವಲ 225 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲು ಸಾಮರ್ಥ್ಯ ಹೊಂದಿದೆ ಎಂದು ಫೇಸ್ ಬುಕ್ ನಲ್ಲಿ ಜೇಟ್ಲಿ ಬರೆದುಕೊಂಡಿದ್ದಾರೆ.