ನವದೆಹಲಿ: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷಕ್ಕೆ ಶುಭಕೋರಿರುವ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು, ಮೊದಲು ಇಂಡೋ-ಪಾಕ್ ಸೌಹಾರ್ಧ ಸಂಬಂಧ ಉತ್ತಮಗೊಳಿಸುವಂತೆ ಮನವಿ ಮಾಡಿದ್ದಾರೆ.
ಪಾಕಿಸ್ತಾನ ಸಾರ್ವತ್ರಿಕ ಚುನಾವಣಾ ಫಲಿತಾಂಶದ ಕುರಿತು ಖಾಸಗಿ ಮಾಧ್ಯಮವೊಂದು ಕಪಿಲ್ ದೇವ್ ಅವರ ಪ್ರತಿಕ್ರಿಯೆ ಕೇಳಿದ್ದು, ಈ ವೇಳೆ ಹಲವು ವಿಚಾರಗಳ ಕುರಿತು ಕಪಿಲ್ ದೇವ್ ಮಾತನಾಡಿದ್ದಾರೆ. ಅಂತೆಯೇ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷಕ್ಕೆ ಕಪಿಲ್ ದೇವ್ ಶುಭ ಕೋರಿದ್ದು, ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ದ್ವೀಪಕ್ಷಯ ಸಂಬಂಧವನ್ನು ಉತ್ತಮಗೊಳಿಸುವಂತೆ ಕಪಿಲ್ ದೇವ್ ಮನವಿ ಮಾಡಿದ್ದಾರೆ.
ಇದೇ ವೇಳೆ ಕ್ರಿಕೆಟ್ ಕುರಿತು ಮಾತನಾಡಿದ ಕಪಿಲ್ ದೇವ್ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸೌಹಾರ್ಧ ಸಂಬಂಧ ಉತ್ತಮಗೊಳ್ಳದ ಹೊರತು ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಮೊದಲು ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವಿನ ಸಂಬಂಧ ಉತ್ತಮಗೊಳ್ಳಬೇಕು. ಇದಕ್ಕಾಗಿ ಭಾವಿ ಪ್ರಧಾನಿ ಇಮ್ರಾನ್ ಖಾನ್ ಅವರು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.
'ಇದು ಬಹು ದೊಡ್ಡ ಸಾಧನೆ. ಇಮ್ರಾನ್ ಈ ಸ್ಥಾನ ತಲುಪಲು 25 ವರ್ಷ ತೆಗೆದುಕೊಂಡಿದ್ದಾರೆ. ಅವರ ಈ ಯಶಸ್ಸು ದೇಶದ ಸುಧಾರಣೆಗೆ ಬಳಕೆಯಾಗಬೇಕು ಎಂದಿದ್ದಾರೆ. ಎರಡೂ ದೇಶದ ಮಧ್ಯೆ ಇರುವ ರಾಜತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅವರು ಮೊದಲು ಪ್ರಯತ್ನಿಸಬೇಕು. ಈ ರಾಜತಾಂತ್ರಿಕ ಸಮಸ್ಯೆ ಬಗೆಹರಿಸಲು ಕ್ರಿಕೆಟ್ ಸಹಾಯ ಪಡೆದರೆ ಎಲ್ಲ ಆಟಗಾರರೂ ಬಹಳ ಖುಷಿ ಪಡುತ್ತಾರೆ. ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ನಂತರ ದೇಶದ ನಾಯಕನಾಗುವುದು ಉತ್ತಮ ಅನುಭವ. ಹಲವಾರು ಆಟಗಾರರು ರಾಜಕೀಯಕ್ಕೆ ಪದಾರ್ಪಣೆ ಮಾಡಿ ಇಂದು ಹಲವು ಸ್ಥಾನಗಳಲ್ಲಿದ್ದಾರೆ. ಆದರೆ, ಇಷ್ಟು ದೊಡ್ಡ ಸ್ಥಾನಕ್ಕೆ ಯಾರೂ ಏರಿಲ್ಲ. ಇಮ್ರಾನ್ ಕೂಡ ಕ್ರಿಕೆಟ್ ಆಟಗಾರ ಆಗಿರುವುದರಿಂದ ಸದ್ಯದ ಪರಿಸ್ಥಿತಿಯನ್ನು ಸುಧಾರಿಸುತ್ತಾರೆ ಎನ್ನುವ ಭರವಸೆಯಿದೆ. ಇಮ್ರಾನ್ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ನಮ್ಮ ಕ್ರಿಕೆಟ್ ಪ್ರೀತಿಯ ಬಗ್ಗೆ ಅರಿವಿದೆ ಎಂದು ಕಪಿಲ್ ಶ್ಲಾಘಿಸಿದ್ದಾರೆ.
1992ರಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನಕ್ಕೆ ವಿಶ್ವಕಪ್ ತಂದು ಕೊಟ್ಟಿದ್ದರು, ಇದೀಗ ಚುನಾವಣೆಯಲ್ಲಿ ಅವರ ಪಿಟಿಐ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಪಾಕಿಸ್ತಾನದ 19ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಹೊಸ್ತಿಲಲ್ಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos