ಅಸ್ಸಾಂ: ಬಿಗಿ ಭದ್ರತೆ ನಡುವೆ ನಾಳೆ ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ- ಎನ್ ಆರ್ ಸಿ ಅಂತಿಮ ಕರಡು ಬಿಡುಗಡೆಯಾಗಲಿದೆ.
ನಾಳೆ ಮಧ್ಯಾಹ್ನ ರಾಜ್ಯಾದ್ಯಂತ ಎಲ್ಲಾ ಎನ್ ಆರ್ ಸಿ ಸೇವಾ ಕೇಂದ್ರಗಳಲ್ಲಿ ಕರಡು ಬಿಡುಗಡೆಯಾಗಲಿದ್ದು, ಅರ್ಜಿದಾರರ ಹೆಸರು, ವಿಳಾಸ , ಹಾಗೂ ಪೋಟೋವನ್ನು ಪರಿಶೀಲಿಸಬಹುದೆಂದು ಎನ್ ಆರ್ ಸಿ ಸಮನ್ವಯಾಧಿಕಾರಿ ಪ್ರತೀಕ್ ಹಜಿಲಾ ಹೇಳಿದ್ದಾರೆ.
1975 ಮಾರ್ಚ್ 25 ರ ಮುಂಚಿನಿಂದಲೂ ಅಸ್ಸಾಂನಲ್ಲಿ ವಾಸಿಸುತ್ತಿರುವ ಎಲ್ಲಾ ಭಾರತೀಯ ನಾಗರಿಕರ ಹೆಸರುಗಳು ಎನ್ ಆರ್ ಸಿ ಪಟ್ಟಿಯಲ್ಲಿ ಇರಲಿವೆ.
ಈ ಮಧ್ಯೆ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ರಾಜ್ಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಯಾ ಜಿಲ್ಲೆಯಲ್ಲಿನ ವರಿಷ್ಠಾಧಿಕಾರಿಗಳು ಸೂಕ್ಷ್ಮ ಪ್ರದೇಶಗಳನ್ನು ಪತ್ತೆ ಹಚ್ಚಿದ್ದು, ಅಂತಹ ಕಡೆಗಳಿಗೆ ಪರಿಸ್ಥಿತಿ ಬಿಗಡಾಯಿಸದಂತೆ ವಿಶೇಷವಾಗಿ ವದಂತಿಗಳು ಹಬ್ಬದಂತೆ ಕ್ರಮಕೈಗೊಳ್ಳಲಾಗಿದೆ. ಅಸ್ಸಾಂ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಭದ್ರತೆಗಾಗಿ ಕೇಂದ್ರೀಯ ಅರಸೇನಾ ಪಡೆಯ 220 ತುಕಡಿಗಳನ್ನು ನಿಯೋಜಿಸಲಾಗಿದೆ.
ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಉನ್ನತ ಮಟ್ಟದ ಸಭೆ ನಡೆಸಿದ್ದು, ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಸರಿಯಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಒಂದು ವೇಳೆ ಪಟ್ಟಿಯಲ್ಲಿ ಹೆಸರು ಇಲ್ಲದವರು ಮತ್ತೆ ಸೇವಾ ಕೇಂದ್ರದಲ್ಲಿ ಆಗಸ್ಟ್ 7 ರಿಂದ ಸೆಪ್ಟೆಂಬರ್ 28ರವರೆಗೂ ಅರ್ಜಿ ಸಲ್ಲಿಸಬಹುದು ಎಂದು ಹಜಿಲಾ ಹೇಳಿದ್ದಾರೆ.