ನವದೆಹಲಿ: ಪಾತಕಿ ಅಬು ಸಲೀಂ ಮೇಲಿನ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ದೆಹಲಿಯ ನ್ಯಾಯಾಲಯ ಜೂನ್.7 ಕ್ಕೆ ಮುಂದೂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಶಿಕ್ಷೆ ನೀಡಬೇಕೆಂಬ ಬಗ್ಗೆ ನಿರ್ಧರಿಸಲು ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ಇಂದು ವಾದ, ಪ್ರತಿವಾದ ನಡೆಯಿತು.
ಸುಲಿಗೆ ಪ್ರಕರಣ ಕುರಿತಂತೆ ಮೇ 30 ರಂದು ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಇಂದಿಗೆ ಮುಂದೂಡಿತ್ತು.
2002ರಲ್ಲಿ ದೆಹಲಿಯ ಉದ್ಯಮಿ ಅಶೋಕ್ ಗುಪ್ತಾ ಅವರಿಗೆ 5 ಕೋಟಿ ರೂಪಾಯಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ಸಲೀಂ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 387, 506, 507 ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ ಇದೇ ಪ್ರಕರಣದಲ್ಲಿ ಅಬು ಸಲೀಂ ಸಹಚರರಾದ ಚಂಚಲ್ ಮೆಹ್ತಾ, ಮಜೀದ್ ಖಾನ್, ಪವನ್ ಕುಮಾರ್ ಮಿತ್ತಲ್ , ಮತ್ತು ಮೊಹಮ್ಮದ್ ಅಶ್ರಪ್ ಅವರನ್ನು ಖುಲಾಸೆಗೊಳಿಸಲಾಗಿದೆ. ಮತ್ತೊಬ್ಬ ಆರೋಪಿ ಸಜ್ಜನ್ ಕುಮಾರ್ ಸೊನಿ ವಿಚಾರಣೆ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ.