ನವದೆಹಲಿ; 2019ರ ಲೋಕಸಭಾ ಚುನಾಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಎನ್'ಡಿಎ ಪಕ್ಷವನ್ನು ಸೋಲಿಸಲು ಪಣತೊಟ್ಟು ನಿಂತಿರುವ ಪ್ರತಿಪಕ್ಷಗಳು, ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ಚುನಾವಣೆಗೂ ಮುನ್ನವೇ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಜೊತೆಗೆ ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಮೈತ್ರಿ ಕುರಿತು ಎರಡೂ ಪಕ್ಷಗಳ ನಡುವೆ ಅನೌಪಚಾರಿಕ ಸಭೆ ಕೂಡ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಉಭಯ ಪಕ್ಷಗಳ ನಡುವೆ ಆರಂಭಿಕ ಹಂತದ ಮಾತುಕತೆಗಳು ನಡೆದಿದ್ದು, 5:2ರ ಅನುಪಾತದಲ್ಲಿ ಸೀಟು ಹಂಚಿಕೆಯ ಪ್ರಸ್ತಾಪವನ್ನು ಆಪ್ ಕಾಂಗ್ರೆಸ್ ಮುಂದಿಟ್ಟಿದೆ. ಈ ಪೈಕಿ ಆಪ್'ಗೆ 5, ಕಾಂಗ್ರೆಸ್'ಗೆ 2 ಕ್ಷೇತ್ರಗಳು ಎಂದು ವರದಿಗಳು ತಿಳಿಸಿವೆ.
ಆಮ್ ಆದ್ಮಿ ಪಕ್ಷದ ಈ ಪ್ರಸ್ತಾಪವನ್ನು ತಿರಸ್ಕರಿಸಿರುವ ಕಾಂಗ್ರೆಸ್, 7 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳನ್ನು ಪಕ್ಷಕ್ಕೆ ಬಿಟ್ಟುಕೊಡುವಂತೆ ಆಪ್'ಗೆ ತಿಳಿಸಿದೆ ಎನ್ನಲಾಗುತ್ತಿದೆ. ಇದರಂತೆ ನವದೆಹಲಿಯಲ್ಲಿ ಶರ್ಮಿಷ್ಠ ಮುಖರ್ಜಿ, ಚಾಂದಿನಿ ಚೌರ್ ನಲ್ಲಿ ಅಜಯ್ ಮಾಕೇನ್ ಮತ್ತು ವಾಯುವ್ಯ ದೆಹಲಿಯಲ್ಲಿ ರಾಜ್ ಕುಮಾರ್ ಚೌಹಾಣ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಟ್ವಿಟರ್ ನಲ್ಲಿ ಕೊಂಡಾಡಿದ್ದರು. ಮನಮೋಹನ್ ಸಿಂಗ್ ರಂತಹ ವಿದ್ಯಾವಂತ ಪ್ರಧಾನಮಂತ್ರಿಗಳನ್ನು ದೇಶ ಮಿಸ್ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದರು.
ಕೇಜ್ರಿವಾರ್ ಅವರ ಈ ಟ್ವೀಟ್ ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಆಪ್ ಸಿದ್ಧತೆ ನಡೆಸಿದೆ ಎಂಬ ಊಹಾಪೋಹಗಳಿಗೆ ಇಂಬು ನೀಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics