ಶ್ರೀನಗರ: ಭದ್ರತಾ ವಾಹನಕ್ಕೆ ಸಿಲುಕಿ ಯುವಕ ಸಾವನ್ನಪ್ಪಿದ ಪ್ರಕರಣದಲ ಬಳಿಕ ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು 3 ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಸಿಆರ್'ಪಿಎಫ್ ಯೋಧರು ಸೇರಿ ಒಟ್ಟು 8 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಶ್ರೀನಗರದ ಫಟೇಕಡಲ್ ನಲ್ಲಿ ಗಸ್ತಿನಲ್ಲಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ಈ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಕಳೆದ 24 ಗಂಟೆಗಳಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿರಿಸಿಕೊಂಡು 3 ಗ್ರೆನೇಡ್ ದಾಳಿಗಳು ನಡೆದಿವೆ.
ಶುಕ್ರವಾರದ ಪ್ರಾರ್ಥನೆ ಮುಗಿಸಿದ ಬಳಿಕ ಶ್ರೀನಗರದ ಹಳೆಯ ಪ್ರದೇಶವಾದ ನೌಹಟ್ಟಾದಲ್ಲಿ ಯುವಕರು ಕಲ್ಲು ತೂರಾಟ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಸಿಆರ್'ಪಿಎಫ್ ಜೀಪ್ ಆಗಮಿಸಿತು. ಯುವಕರು ಸಿಕ್ಕಸಿಕ್ಕ ವಸ್ತುಗಳಿಂದ ದಾಳಿ ನಡೆಸಿದರು. ಮೇಲೆ ಹತ್ತಿ ನಿಂತು ತುಳಿಯಲು ಆರಂಭಿಸಿದ್ದರು.
ಇದೇ ವೇಳೆ ಆಗಮಿಸಿದ ಮತ್ತೊಂದು ಜೀಪಿನ ಮೇಲೂ ಅವರ ಆಕ್ರೋಶ ವ್ಯಕ್ತವಾದಾಗ, ಅದರ ಚಾಲಕ ಸಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದ. ಈ ವೇಳೆ ಇಬ್ಬರು ಯುವಕರು ಜೀಪಿನ ಕೆಳಗೆ ಸಿಲುಕಿದ್ದರು. ಈ ದೃಸ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಜೀಪ್ ಕೆಳಗೆ ಸಿಕ್ಕಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ 21 ವರ್ಷದ ಕೈಸರ್ ಭಟ್ ಎಂಬಾತ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದ.