ದೇಶ

ಮಧ್ಯ ಪ್ರದೇಶ: 60 ಲಕ್ಷ ನಕಲಿ ಮತದಾರರ ಸೇರ್ಪಡೆ, ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Srinivasamurthy VN
ಭೋಪಾಲ್: ಕರ್ನಾಟಕದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಮತದಾರ ಗುರುತಿನ ಚೀಟಿ ಪತ್ತೆಯಾದ ಪ್ರಕರಣ ಹಸಿರಾಗಿರುವಂತೆಯೇ ಮಧ್ಯ ಪ್ರದೇಶದಲ್ಲಿ ಬರೊಬ್ಬರಿ 60 ಲಕ್ಷ ನಕಲಿ ಮತದಾರರ ಪಟ್ಟಿ  ದೊರೆತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮುಂಬರುವ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಏತನ್ಮಧ್ಯೆ ರಾಜ್ಯದಲ್ಲಿ ಸುಮಾರು 60 ಲಕ್ಷ ನಕಲಿ ಮತದಾರರ ಪಟ್ಟಿ ದೊರೆತಿದೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಮತದಾರರ ಪಟ್ಟಿಯಲ್ಲಿ 60 ಲಕ್ಷ ನಕಲಿ ಮತದಾರರ ಹೆಸರನ್ನು ಸೇರಿಸುವ ಮೂಲಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಈ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. 
ಈ ಬಗ್ಗೆ ನಿನ್ನೆ ಮಧ್ಯಪ್ರದೇಶದ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ನೇತೃತ್ವದ ನಿಯೋಗವು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭಾನುವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ನಾಥ್‌ ಅವರು, ' ಮತದಾರರ ಪಟ್ಟಿಯಲ್ಲಿರುವ ನಕಲಿ ಮತದಾರರ ಬಗ್ಗೆ ಸಾಕ್ಷ್ಯ ನೀಡಿದ್ದೇವೆ. 100 ವಿಧಾನಸಭಾ ಕ್ಷೇತ್ರಗಳಲ್ಲಿ ನಾವೇ ಸ್ವಂತ ವಿಚಾರಣೆ ನಡೆಸಿದ್ದೇವೆ. ಒಬ್ಬರ ಹೆಸರನ್ನು ಅವರ ತಂದೆಯ ಹೆಸರಿನೊಂದಿಗೆ ಹಲವು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಬಿಜೆಪಿ ಸರ್ಕಾರ ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿದೆ'. 
ಒಬ್ಬರ ಹೆಸರು ಬಹಳ ಕ್ಷೇತ್ರದ ಮತದಾರರ ಪಟ್ಟಿಯಲ್ಲಿರುವುದನ್ನು ತೆಗೆದು ಹಾಕಲು ವಿಶೇಷ ಮೇಲ್ವಿಚಾರಣಾ ವ್ಯವಸ್ಥೆ ಮಾಡಬೇಕು. ಇಂಥಹ ನಕಲಿ ಮತದಾರರ ಹೆಸರು ಪತ್ತೆ ಹಚ್ಚಿರುವುದರ ಬಗ್ಗೆ ವಾರಕ್ಕೊಮ್ಮೆ ಎಲ್ಲ ರಾಷ್ಟ್ರೀಯ ಪಕ್ಷಗಳನ್ನು ಕರೆದು ಮಾಹಿತಿ ನೀಡಬೇಕು. ಕನಿಷ್ಠ ಜಿಲ್ಲಾ ಮಟ್ಟದಲ್ಲಾದರೂ ಈ ಪ್ರಕ್ರಿಯೆ ನಡೆಯಬೇಕು ಎಂದು ಕಾಂಗ್ರೆಸ್‌ ನಿಯೋಗವು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಅಧಿಕಾರಿಗಳು ತಯಾರಿಸಿರುವ ಪಟ್ಟಿ ಪ್ರಕಾರ ರಾಜ್ಯದ ಮತದಾರರ ಸಂಖ್ಯೆಯಲ್ಲಿ ಶೇ.40 ರಷ್ಟು ಏರಿಕೆಯಾಗಿದೆ. ಆದರೆ, ಜನಸಂಖ್ಯೆಯಲ್ಲಿ ಶೇ 24 ರಷ್ಟು ಮಾತ್ರ ಏರಿಕೆಯಾಗಿದೆ.  ಚುನಾವಣಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
SCROLL FOR NEXT