ಆರ್ ಎಸ್ಎಸ್ ಕಾರ್ಯಕ್ರಮ: ನಿರ್ಧಾರ ಮರುಪರಿಶೀಲಿಸಲು ಪ್ರಣಬ್ ಗೆ ಅಸ್ಸಾಂ ಕೈ ಮುಖಂಡನ ಸಲಹೆ
ಅಸ್ಸಾಂ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಅಸ್ಸಾಂ ಕಾಂಗ್ರೆಸ್ ಮುಖಂಡ ರಿಪುನ್ ಬೋರಾ ಹೇಳಿದ್ದಾರೆ.
ಪ್ರಣಬ್ ಮುಖರ್ಜಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿರುವ ರಿಪುನ್ ಬೋರಾ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈಗ ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ ದೇಶ ಅವರನ್ನು ಕಾಂಗ್ರೆಸ್ ಗೆ ಸಮರ್ಪಿತವಾದ ಹಿರಿಯ ನಾಯಕ ಎಂದು ಗುರುತಿಸುತ್ತದೆ. ನಾಗ್ಪುರದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವುದು ಸಾಮಾಜಿಕ-ರಾಜಕೀಯವಾಗಿ ದೂರಗಾಮಿ ಪರಿಣಾಮಗಳನ್ನು ಬೀರಲಿದೆ, ಆದ್ದರಿಂದ ಪ್ರಣಬ್ ಮುಖರ್ಜಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಬೋರಾ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ನ ಜಾತ್ಯಾತೀತ ಸಿದ್ಧಾಂತಕ್ಕೆ ತದ್ವಿರುದ್ಧವಾಗಿರುವ ಸಿದ್ಧಾಂತ ಹೊಂದಿರುವ ಸಂಘಟನೆಯ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೋಗಲು ನಿರ್ಧರಿಸಿರುವುದು ಅಚ್ಚರಿ ಉಂಟುಮಾಡಿದೆ. ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ ಎದುರಿಸಿದ ಸಂಕಷ್ಟದ ದಿನಗಳಲ್ಲಿ ನೀವು ಪಕ್ಷದ ಜೊತೆಗೆ ನಿಂತವರು, ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ ಪಕ್ಷದ ಪುನರುಜ್ಜೀವನಕ್ಕೆ ನಿಮ್ಮ ಕೊಡುಗೆ, ಸಮರ್ಪಣೆಯನ್ನು ಎಂದಿಗೂ ಸ್ಮರಿಸುವಂಥಹದ್ದು, ಆದ್ದರಿಂದ ನಿಮ್ಮ ನಿರ್ಧಾರವನ್ನು ನೀವು ಮರುಪರಿಶೀಲಿಸಬೇಕು ಎಂದು ಅಸ್ಸಾಂ ಕೈ ಅಧ್ಯಕ್ಷ ರಿಪುನ್ ಬೋರಾ ಒತ್ತಾಯಿಸಿದ್ದಾರೆ.