ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ; ರಫೇಲ್ ಒಪ್ಪಂದದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಆಧಾರ ರಹಿತವಾದದ್ದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ.
ಆರೋಪಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ರಫೇಲ್ ಒಪ್ಪಂದದಲ್ಲಿ ಯಾವುದೇ ರೀತಿಯ ಅಕ್ರಮಗಳೂ ನಡೆದಿಲ್ಲ. ಆರೋಪಗಳು ಆಧಾರ ರಹಿತವಾದದ್ದು ಎಂದು ಹೇಳಿದ್ದಾರೆ.
ಇದೇ ವೇಳೆ ರಕ್ಷಣಾ ಇಲಾಖೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವವಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಒಂದೆಡೆ ಸಾವಿರಾರು ಕೋಟಿ ವೆಚ್ಚ ಮಾಡಿ ವಿದೇಶಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸುತ್ತಿರುವ ಸರ್ಕಾರ, ಮತ್ತೊಂದೆಡೆ ಸೈನಿಕರಿಗೆ ಸೇನಾ ಸಮವಸ್ತ್ರ ಖರೀದಿಸಲೂ ಹಣವಿಲ್ಲದ ಸ್ಥಿತಿ ತಲುಪಿದೆ ಎಂಬ ಗಂಭೀರ ಆರೋಪಗಳು ಈ ಹಿಂದೆ ಕೇಳಿ ಬಂದಿದ್ದವು.
ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ತುರ್ತು ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚುವರಿ ಹಣ ಒದಗಿಸಿಲ್ಲ ಹೀಗಾಗಿ ಸರ್ಕಾರಿ ಸಶಸ್ತ್ರ ಕಾರ್ಖಾನೆಗಳಿಂದ ಸೇನೆಗೆ ಪೂರೈಕೆ ಪ್ರಮಾಣವನ್ನು ಶೇ.94ರಿಂದ ಶೇ.50ಕ್ಕೆ ಇಳಿಸಲಾಗಿದೆ. ಈ ಹಣವನ್ನು ತುರ್ತು ಸಮಯಕ್ಕೆ ಬೇಕಾದ ಶಸ್ತ್ರಾಸ್ತ್ರ ಖರೀದಿಗೆ ಬಳಸಲು ಸೇನೆ ನಿರ್ಧರಿಸಿದೆ. ಹೀಗೆ ಹಣಕಾಸಿನ ನೆರವಿನ ಕಡಿತದ ಪರಿಣಾಮ ಯೋಧರು ತಮ್ಮ ಸಮವಸ್ತ್ರ ಟೋಪಿ, ಬೆಲ್ಟ್'ಗಳು, ಶೂಗಳನ್ನು ತಾವೇ ಖರೀದಿಸಬೇಕಾಗಿದೆ. ಕೆಲವು ವಾಹನಗಳ ಬಿಡಿಭಾಗಗಳ ಖರೀದಿಗೂ ಸೇನೆಯಲ್ಲಿ ಅನುದಾನದ ಕೊರತೆಗಳಿವೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿತ್ತು.