ನವದೆಹಲಿ: ಆಮ್ ಆದ್ಮಿ ಸರ್ಕಾರಕ್ಕೆ ಸಾಕಷ್ಟು ಅಡಚಣೆ ಉಂಟುಮಾಡದೆ ಇರುವುದಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಕೋಪಗೊಂಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ.
ಸದ್ಯದ ಲೆಫ್ಟಿನೆಂಟ್ ಗವರ್ನರ್ ಮೇಲೆ ಪ್ರಧಾನಿ ಮೋದಿಗೆ ಸಿಕ್ಕಾಪಟ್ಟೆ ಕೋಪ ಇದೆ ಎಂಬುದು ನನಗೆ ತಿಳಿದಿದೆ. ಬೈಜಾಲ್ ದೆಹಲಿ ಸರ್ಕಾರಕ್ಕೆ ಸಾಕಷ್ಟು ತೊಂದರೆ ನೀಡುತ್ತಿಲ್ಲ ಎಂದು ಪ್ರಧಾನಿ ಭಾವಿಸಿದ್ದಾರೆ. ಆದರೆ ಎಲ್ಲಾ ಅಡಚಣೆಗಳ ನಡುವೆಯೇ ಆಪ್ ಸರ್ಕಾರ ಜನರಿಗಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ನಮ್ಮ ಸರ್ಕಾರಕ್ಕೆ ತೊಂದರೆ ಕೊಡಲಿಲ್ಲ ಎಂಬ ಕಾರಣಕ್ಕಾಗಿಯೇ ಹಿಂದಿನ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ತೆಗೆದು ಹಾಕಲಾಗಿತ್ತು ಎಂದು ದೆಹಲಿ ಸಿಎಂ ದೂರಿದ್ದಾರೆ.
ನನಗೆ ತಿಳಿಸಿದ ಮೂಲಗಳ ಪ್ರಕಾರ, ಶಿಕ್ಷಣ, ಆರೋಗ್ಯ, ನೀರು ಮತ್ತು ಇಂಧನ ಕ್ಷೇತ್ರದಲ್ಲಿ ದೆಹಲಿ ಸರ್ಕಾರ ಮಾಡುತ್ತಿರುವ ಉತ್ತಮ ಕೆಲಸವನ್ನು ತಡೆಯಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಲೆಫ್ಟಿನೆಂಟ್ ಗವರ್ನರ್ ಮಾಡಬೇಕು ಎಂದು ಪ್ರಧಾನಿ ಬಯಸಿದ್ದಾರೆ. ಆದರೆ ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಉತ್ತಮ ಕೆಲಸ ಮುಂದುವರೆಯಲಿದೆ. ದೇವರು ಮತ್ತು ಜನ ನಮ್ಮೊಂದಿಗೆ ಇದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿಗೆ ಮತ ಹಾಕುವುದರಿಂದ ನಗರಗಳ ಮತ್ತು ರೈಲ್ವೆ ನಿಲ್ದಾಣಗಳ ಹೆಸರು ಮಾತ್ರ ಬದಲಾಗುತ್ತದೆ. ಆದರೆ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ ಎಂದು ದೆಹಲಿ ಸಿಎಂ ತಿಳಿಸಿದ್ದಾರೆ.