ಉತ್ತರ ಪ್ರದೇಶ: ಕ್ರಿ.ಪೂ 2200-1800 ಅವಧಿಯ ರಥಗಳ ಪಳಯುಳಿಕೆಗಳು ಪತ್ತೆ!
ಲಖನೌ: ಉತ್ತರ ಪ್ರದೇಶದ ಸನೌಲಿಯಲ್ಲಿ ಕಳೆದ 5 ತಿಂಗಳಿನಿಂದ ಭಾರತದ ಪುರಾತತ್ವ ಸಂಸ್ಥೆ ನಡೆಯುತ್ತಿರುವ ಉತ್ಖನನದಲ್ಲಿ ಕ್ರಿ.ಪೂ 2200-1800 ಅವಧಿಯ ರಥಗಳ ಪಳಯುಳಿಕೆಗಳು ಪತ್ತೆಯಾಗಿವೆ.
ಭಾರತದ ಪುರಾತತ್ವ ಸಂಸ್ಥೆಗೆ ಇದೇ ಮೊದಲ ಬಾರಿಗೆ ಕಂಚಿನ ಯುಗಕ್ಕೆ ಸಂಬಂಧಿಸಿದ ರಥ, ಖಡ್ಗ, ಅಲಂಕಾರಿಕ ಪೆಟ್ಟಿಗೆಗಳ ಭೌತಿಕ ಪಳೆಯುಳಿಕೆಗಳು ಪತ್ತೆಯಾಗಿದ್ದು ಇವುಗಳ ಅವಧಿ ಕನಿಷ್ಠ ಕ್ರಿ.ಪೂ 2,200-1800 ನಷ್ಟು ಹಿಂದಿನದ್ದು ಎಂದು ಹೇಳಲಾಗುತ್ತಿದೆ. ಕಂಚಿನಿಂದ ಮಾಡಲಾಗಿದ್ದ ನಾಲ್ಕು ಖಡ್ಗಗಳು, ತಾಮ್ರದ ಕಿರೀಟ, ಚಕ್ರಗಳು, ಶಿರಸ್ತ್ರಾಣ, ಆಭರಣಗಳು, ಗುರಾಣೀ, ಕಠಾರಿಗಳು ಹಾಗೂ ಮಾನವ ಪಳೆಯುಳಿಕೆಗಳು ಉತ್ಖನನದ ವೇಳೆಯಲ್ಲಿ ಪತ್ತೆಯಾಗಿವೆ.
ಪತ್ತೆಯಾಗಿರುವ ವಸ್ತುಗಳು ಅಂದಿನ ಕಾಲದ ಯೋಧರಿಗೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ಜೀವನಶೈಲಿ ರೂಪಿಸಿಕೊಂಡಿದ್ದಿರಬಹುದು ಎಂಬುದನ್ನು ಸೂಚಿಸುತ್ತಿವೆ. ಅಷ್ಟೇ ಅಲ್ಲದೇ ಖಡ್ಗಗಳಿಗೆ ತಾಮ್ರ ಲೇಪಿತ ಹಿಡಿಗಳಿದ್ದು, ಯುದ್ಧಕ್ಕಾಗಿ ಹೇಳಿ ಮಾಡಿಸಿದಂತಿತ್ತು, ಇದರೊಟ್ಟಿಗೆ ಪತ್ತೆಯಾದ ಗುರಾಣಿ, ಕಠಾರಿಗಳೂ ಸಹ ಅಂದಿನ ಕಾಲದಲ್ಲಿ ಸೊಗಸಾದ ಜೀವನ ಶೈಲಿ ಇತ್ತು ಎಂಬುದನ್ನು ಸೂಚಿಸುತ್ತವೆ.
ಪುರಾತತ್ವಶಾಸ್ತ್ರಜ್ಞ ಆರ್ ಕೆ ಶ್ರೀವಾಸ್ತವ ಈಗಿನಿಂದ 5000 ವರ್ಷಗಳ ಹಿಂದಿನ ನಾಗರಿಕತೆ ಹರಪ್ಪ ನಾಗರಿಕತೆಯಾಗಿದ್ದು, ಈಗ ಪತ್ತೆಯಾಗಿರುವುದೂ ಸಹ ಅದೇ ನಾಗರಿಕತೆಯದ್ದಾಗಿರಬಹುದೆಂದು ಹೇಳಿದ್ದಾರೆ. ಈಗ ಪತ್ತೆಯಾಗಿರುವ ರಥಗಳು ಹಾಗೂ ಇನ್ನಿತರ ವಸ್ತುಗಳು ಪುರಾತನ ನಾಗರಿಕತೆಯಾದ ಮೆಸಪೊಟೇಮಿಯಾ, ಗ್ರೀಸ್ ನಾಗರಿಕತೆಯಂಥದ್ದೇ ಹಳೆಯ ನಾಗರಿಕತೆಗೆ ಸಮಾನವಾಗಿತ್ತು ಎಂಬುದನ್ನು ಸೂಚಿಸುತ್ತವೆ ಎಂದು ಪುರಾತತ್ವ ತಂಡದ ಮುಖ್ಯಸ್ಥರಾದ ಎಸ್ ಕೆ ಮಂಜುಳ್ ಹೇಳಿದ್ದು ಈಗ ಪತ್ತೆಯಾಗಿರುವ ವಸ್ತುಗಳು ವಿಶ್ವದ ಪುರಾತನ ಇತಿಹಾಸದಲ್ಲಿ ಭಾರತದ ಸ್ಥಾನ ಏನಾಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇವು ಮಹಾಭಾರತದ ಅವಧಿಗೆ ಸಂಬಂಧಿಸಿದ್ದಾಗಿತ್ತೇ ಎಂಬ ಪ್ರಶ್ನೆಗೆ ಪುರಾತತ್ವಶಾಸ್ತ್ರಜ್ಞರಿಗೆ ನಿಖರವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಆದರೆ ವಸ್ತ್ರಾಭರಣಗಳ ಕುರುಹು ಅದು ಅತ್ಯಂತ ಶ್ರೀಮಂತ, ಸಂವೃದ್ಧ ಕಾಲದ್ದಾಗಿತ್ತು ಎಂದಷ್ಟೇ ತಿಳಿಸಿದ್ದಾರೆ.