ಆಂಧ್ರ ಪ್ರದೇಶ: ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ ಮೇಲೆ ಜೇನು ದಾಳಿ,
ಹೈದರಾಬಾದ್: ಆಂಧ್ರ ಪ್ರದೇಶ ವಿರೋಧ ಪಕ್ಷದ ನಾಯಕ ವೈಎಸ್ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಮೇಲೆ ಹೆಜ್ಜೇನು ದಾಳಿ ನಡೆದಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾದಯಾತ್ರೆ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಜಗನ್ಮೋಹನ ರೆಡ್ಡಿ ಅಪಾಯದಿಂದ ಪಾರಾಗಿದ್ದರೂ ಸಹ ಅವರ ಸುತ್ತಲಿದ್ದ ಕನಿಷ್ಠ 10 ಕಾರ್ಯಕರ್ತರು ಜೇನು ಹುಳದಿಂಡ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ಬೆಳಿಗ್ಗೆ 10 ಗಂಟೆಗೆ ನಿಡದವುಲು ವಿಧಾನಸಭೆ ಕ್ಷೇತ್ರದಲ್ಲಿನ ಕನೂರು ಕ್ರಾಸ್ ರಸ್ತೆಯಲ್ಲಿ ಗ್ರಾಮಸ್ಥರೊಡನೆ ಸಂಭಾಷಣೆಯಲ್ಲಿ ನಿರತರಾಗಿದ್ದ ರೆಡ್ಡಿ ಮೇಲೆ ಜೇನು ನೊಣಗಳು ದಾಳಿ ನಡೆಸಿದೆ. ಅವರು 183ನೇ ದಿನದ ಮಹಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜೇನಿನ ದಾಳಿಯಿಂದ ಬೆದರಿದ ಕೆಲ ಗ್ರಾಮಸ್ಥರು, ಕಾರ್ಯಕರ್ತರು ದಿಕ್ಕು ಪಾಲಾಗಿ ಓಡಿದ್ದಾರೆ. ಆದರೆ ಇನ್ನು ಕೆಲವರು ಜಗನ್ಮೋಹನ್ ರೆಡ್ಡಿ ಸುತ್ತಲೂ ಕೋಟೆಯಂತೆ ನಿಂತು ರಕ್ಷಣೆ ಒದಗಿಸುವ ಪ್ರಯತ್ನ ನಡೆಸಿದ್ದಾರೆ.
ಹೆಜ್ಜೇನು ದಾಳಿ ನಡೆಸಿರುವುದಕ್ಕೆ ಕಾರಣವೇನೆಂದು ಪತ್ತೆಯಾಗಿಲ್ಲ. ರೆಡ್ಡಿ ತನ್ನ 3,000 ಕಿ.ಮೀ ಉದ್ದದ ಪ್ರಜಾ ಸಂಕಲ್ಪ ಯಾತ್ರೀಯನ್ನು ಕಡಪಾದ ಇಡುಪುಲಾಪಯದಿಂದ ನವೆಂಬರ್ 6 ರಂದು ಪ್ರಾರಂಭಿಸಿ ಇಂದಿನವರೆಗೆ 2,268 ಕಿ.ಮೀ ನಡೆದಿದ್ದಾರೆ.