ದೇಶ

ಪ್ರಣಬ್ ರನ್ನು ಪ್ರಧಾನಿ ಅಭ್ಯರ್ಥಿ ಮಾಡಲು ಆರ್ ಎಸ್ಎಸ್ ಚಿಂತನೆ ನಡೆಸುತ್ತಿರುವಂತಿದೆ: ಶಿವಸೇನೆ

Srinivasamurthy VN
ಮುಂಬೈ: 2019ರ ಲೋಕಸಭಾ ಚುನಾವಣೆಯಲ್ಲಿ ಆರ್ ಎಸ್ ಎಸ್ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಲು ಆರ್ ಎಸ್ಎಸ್ ಚಿಂತನೆ ನಡೆಸುತ್ತಿರುವಂತಿದೆ ಎಂದು ಶಿವಸೇನೆ ಹೇಳಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಅಂಕಣ ಪ್ರಕಟಿಸಲಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ ಇದೆ.  ಬಿಜೆಪಿ ಏನಾದರೂ ಅಧಿಕಾರಕ್ಕೆ ಬರುವಲ್ಲಿ ವಿಫಲವಾದರೆ ಪ್ರಣಬ್‌ ಮುಖರ್ಜಿರನ್ನು ಪ್ರಧಾನ ಮಂತ್ರಿ  ಅಭ್ಯರ್ಥಿಯಾಗಿ ಮುನ್ನಲೆಗೆ ತರಲು ಆರ್‌ಎಸ್‌ಎಸ್‌ ತಂತ್ರಗಾರಿಕೆ ಹೆಣೆಯುತ್ತಿದೆ ಎಂದು ಶಿವಸೇನೆ ಹೇಳಿದೆ.
'ನಾಗಪುರಕ್ಕೆ ಪ್ರಣಬ್‌ರನ್ನು ಆಹ್ವಾನಿಸುವ ಹಿಂದೆ ಈ ರೀತಿಯ ಆಲೋಚನೆ ಆರ್‌ಎಸ್ಎಸ್‌ಗೆ ಇರಬಹುದು. ದೇಶವನ್ನು ಪ್ರೀತಿಸಿ, ವೈವಿಧ್ಯತೆಯನ್ನು ಗೌರವಿಸಿ, ಸೌಹಾರ್ದತೆಯಲ್ಲಿ ಬದುಕಿ ಎಂದು ಮುಖರ್ಜಿ ಹೇಳಿದ ಮಾತಿಗೆ ಆರ್‌ಎಸ್‌ಎಸ್‌ ಕರತಾಡನ ವ್ಯಕ್ತಪಡಿಸಿದೆ' ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ಅಂತೆಯೇ ಈ ಹಿಂದೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ನ್ಯಾಯಾಂಗದ ವಿರುದ್ಧ ನ್ಯಾಯಾಧೀಶರ ಅಸಮಾಧಾನ ಹಾಗೂ ಹಣದುಬ್ಬರ ವಿಚಾರವಾಗಿ ಪ್ರಣಬ್‌ ಮುಖರ್ಜಿ ಯಾವುದೇ ಮಾತನಾಡಲಿಲ್ಲ. ಕಾಂಗ್ರೆಸ್‌ ನಾಯಕರು ಹಾಗೂ ಆರ್‌ಎಸ್‌ಎಸ್‌ ನಡುವಿನ ಹೊಸ ಅವಿನಾಭಾವ ಸಂಬಂಧದ ಸ್ವಾರಸ್ಯ 2019ರ ಚುನಾವಣೆ ಬಳಿಕವೇ ಗೊತ್ತಾಗಲಿದೆ ಎಂದು ಶಿವಸೇನಾ ವ್ಯಂಗ್ಯ ಮಾಡಿದೆ.
SCROLL FOR NEXT