ನವದೆಹಲಿ: ಏರ್ ಸೆಲ್-ಮ್ಯಾಕ್ಸಿಸ್ ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ನಿಯಂತ್ರಣದಲ್ಲಿರುವ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್(ಎಎಸ್ ಸಿಪಿಎಲ್) 26 ಲಕ್ಷ ರುಪಾಯಿ ಲಂಚ ಸ್ವೀಕರಿಸಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ತನ್ನ ಚಾರ್ಜ್ ಶೀಟ್ ನಲ್ಲಿ ಆರೋಪಿಸಿದೆ.
ಏರ್ ಸೆಲ್- ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಂದು ಕಾರ್ತಿ ಚಿದಂಬರಂ ಹಾಗೂ ಇತರರ ವಿರುದ್ಧ ದೆಹಲಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಎಎಸ್ ಸಿಪಿಎಲ್ ಕಾರ್ತಿ ಚಿದಂಬರಂ ನಿರ್ದೇಶನದ ಮೇರಗೆ ಸ್ಥಾಪಿಸಲಾಗಿದೆ ಮತ್ತು ಅದು ಸಂಪೂರ್ಣ ಅವರ ನಿಯಂತ್ರಣದಲ್ಲಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ಅಲ್ಲದೆ ಎಎಸ್ ಸಿಪಿಎಲ್ ಸ್ಥಾಪನೆದೆ ಕಾರ್ತಿ ಚಿದಂಬರಂ ಹಣ ಒದಗಿಸಿದ್ದಾರೆ ಎಂದು ದೂರಿದೆ.
ಎಎಸ್ ಸಿಪಿಎಲ್ ನ ಪ್ರತಿಯೊಂದು ವ್ಯವಹಾರವೂ ಕಾರ್ತಿ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಆಂತರಿಕ ಇಮೇಲ್ ಗಳಿಂದ ಸ್ಪಷ್ಟವಾಗಿದೆ ಎಂದು ಇಡಿ ಹೇಳಿದೆ.
ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆಯಷ್ಟೇ ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಅವರನ್ನು ಸತತ ಆರು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರನ್ನು ಫೆ. 28ರಂದು ಇಂಗ್ಲೆಂಡ್‌ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಗಿತ್ತು. ಸದ್ಯ, ಕಾರ್ತಿ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ 2007ರಲ್ಲಿ ಐಎನ್‌ಎಕ್ಸ್ ಮೀಡಿಯಾಕ್ಕೆ ವಿದೇಶದಿಂದ 305 ಕೋಟಿ ದೇಣಿಗೆ ಪಡೆದುಕೊಳ್ಳಲು ಎಫ್‌ಐಪಿಬಿ ಅನುಮೋದನೆ ಕೊಡಿಸಲು ಕಂಪೆನಿಯಿಂದ ಹಣ ಪಡೆದ ಆರೋಪವನ್ನು ಕಾರ್ತಿ ಎದುರಿಸುತ್ತಿದ್ದಾರೆ.