ದೇಶ

ರಂಜಾನ್ ಕದನ ವಿರಾಮ ಯಶಸ್ಸುಗೊಳ್ಳುವುದೋ, ಇಲ್ಲವೋ ಹೇಳಲು ಸಾಧ್ಯವಿಲ್ಲ; ನಿವೃತ್ತ ಲೆ.ಜ ಹೂಡಾ

Manjula VN
ಚಂಡೀಗಢ: ರಂಜಾನ್ ಕದನ ವಿರಾಮ ಯಶಸ್ಸುಗೊಳ್ಳುವುದೋ ಅಥವಾ ವಿಫಲಗೊಳ್ಳುವುದೋ ಎಂಬುದರ ಕುರಿತು ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್ ಹೂಡಾ ಅವರು ಶುಕ್ರವಾರ ಹೇಳಿದ್ದಾರೆ. 
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕದನ ವಿರಾಮ ಯಶಸ್ಸುಗೊಳ್ಳುವುದೋ ಅಥವಾ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಭದ್ರತಾ ಪಡೆಗಳ ಮುಂದೆ ಸಾಕಷ್ಟು ದೊಡ್ಡ ಸವಾಲುಗಳಿವೆ. ಕದನ ವಿರಾಮವನ್ನು ಉಗ್ರ ಸಂಘಟನೆಗಳು ಒಪ್ಪಿಕೊಂಡಿಲ್ಲ. ಭದ್ರತಾ ಪಡೆಗಳ ಮೇಲಿನ ದಾಳಿಗಳು ಕಡಿಮೆಯಾಗಿಲ್ಲ. ಪಾಕಿಸ್ತಾನ ಗಡಿ ಮೂಲಕ ಉಗ್ರರನ್ನು ಭಾರತದೊಳಗೆ ನುಸುಳುವಂತೆ ಮಾಡುತ್ತಿವೆ. ಪದೇ ಪದೇ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಲೇ ಇದೆ ಎಂದು ಹೇಳಿದ್ದಾರೆ. 
ಬಳಿಕ ಪತ್ರಕರ್ತ ಶುಜಾತ್ ಬುಖಾರಿ ಹಾಗೂ ಯೋಧ ಔರಂಗಜೇಬ್ ಹತ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಂಜಾನ್ ಕದನ ವಿರಾಮ ಘೋಷಣೆ ಉಗ್ರರಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಿದಂತಾಗಿದೆ. 
ನಿನ್ನೆಯಷ್ಟೇ ದುರ್ಘಟನೆಯೊಂದು ಸಂಭವಿಸಿದೆ. ವೀರ ಯೋಧರೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಇಲ್ಲದೆ, ಗೌರವಾನ್ವಿತ ಪತ್ರಕರ್ತರೊಬ್ಬರನ್ನು ಕಳೆದುಕೊಂಡಿದ್ದೇವೆ. ಕದನ ವಿರಾಮ ಘೋಷಣೆಯಿಂದ ಕೆಲ ಕೆಟ್ಟ ಘಟನೆಗಳು ಸಂಭವಿಸುತ್ತಿರಬಹುದು. ಆದರೆ, ಕೆಲ ಧನಾತ್ಮಕ ಬೆಳವಣಿಗೆಗಳೂ ಕೂಡ ಕಂಡು ಬರುತ್ತಿವೆ ಎಂದು ತಿಳಿಸಿದ್ದಾರೆ. 
ಕದನ ವಿರಾಮ ಘೋಷಣೆ ಮಾಡಿದ ಬಳಿಕ ಕೆಲ ಜನರು ಧನಾತ್ಮಕವಾಗಿ ಚಿಂತನೆ ನಡೆಸಲು ಆರಂಭಿಸಿದರು. ನಾಗರೀಕರ ಸಾವು, ಭದ್ರತಾಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ನಡೆಯುತ್ತಿದ್ದ ಘರ್ಷಣೆಗಳು ಕಡಿಮೆಯಾಗಿದೆ ಎಂದಿದ್ದಾರೆ. 
SCROLL FOR NEXT