ದೇಶ

ಹಲವು ಪಾಸ್ ಪೋರ್ಟ್ ಬಳಸುತ್ತಿರುವ ನೀರವ್ ಮೋದಿ ವಿರುದ್ಧ ಹೊಸ ಎಫ್ಐಆರ್ ದಾಖಲು

Lingaraj Badiger
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರು.ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಅರ್ಧ ಡಜನ್ ಗೂ ಹೆಚ್ಚು ಭಾರತೀಯ ಪಾಸ್ ಪೋರ್ಟ್ ಗಳನ್ನು ಬಳಸುತ್ತಿದ್ದು, ಈ ಸಂಬಂಧ ಆತನ ವಿರುದ್ಧ ಹೊಸ ಎಫ್ಐಆರ್ ದಾಖಲಿಸಲಾಗಿದೆ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಗುಪ್ತಚರ ಸಂಸ್ಥೆಗಳು ನೀರವ್ ಮೋದಿ ಪದೇಪದೆ ಬೆಲ್ಜಿಯಂಗೆ ಭೇಟಿ ನೀಡುತ್ತಿರುವುದನ್ನು ಪತ್ತೆ ಹಚ್ಚಿದ್ದು, ಆತನ ಬಳಿ ಒಟ್ಟು ಆರು ಪಾಸ್ ಪೋರ್ಟ್ ಗಳಿವೆ ಎನ್ನಲಾಗಿದೆ.
ಆರು ಪಾಸ್ ಪೋರ್ಟ್ ಗಳ ಪೈಕಿ ನಾಲ್ಕು ಚಾಲ್ತಿಯಲ್ಲಿಲ್ಲ. ಆದರೆ ಎರಡು ಚಾಲ್ತಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ನೀರವ್ ಮೋದಿ ಕುರಿತು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಕಳೆದ ಮಾರ್ಚ 31ರವರೆಗೂ ನೀರವ್ ಮೋದಿ ಬ್ರಿಟನ್ ನಲ್ಲೇ ಇದ್ದ. ಬಳಿಕ ತನ್ನ ಇತರೆ ಪಾಸ್ ಪೋರ್ಟ್ ಗಳ ಸಹಾಯದಿಂದ ಮತ್ತೊಂದು ದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕಿಸಿದ್ದಾರೆ. 
ಚಾಲ್ತಿಯಲ್ಲಿರುವ ಒಂದಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಬಳಸುವುದು ಮತ್ತು ಚಾಲ್ತಿಯಲ್ಲಿಲ್ಲದ ಪಾಸ್ ಪೋರ್ಟ್ ಬಳಸುವುದು ಅಪರಾಧ. ಹೀಗಾಗಿ ನೀರವ್ ಮೋದಿ ವಿರುದ್ಧ ಹೊಸದಾಗಿ ಕ್ರಿಮಿನಲ್ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಸಿಬಿಐ ಅಧಿಕಾರಿಗಳು ನೀರವ್ ಮೋದಿ ಮತ್ತು ಅವರ ಕುಟುಂಬಸ್ಥರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಇಂಟರ್ ಪೋಲ್ ಗೆ ಮನವಿ ಮಾಡಿದ್ದಾರೆ. ಪ್ರಮುಖವಾಗಿ ಉದ್ಯಮಿ ನೀರವ್ ಮೋದಿ, ಆತನ ಸಹೋದರ ನಿಶಾಲ್ ಮೋದಿ, ಅಂಕಲ್ ಮೆಹುಲ್ ಚೋಕ್ಸಿ, ಸುಭಾಷ್ ಪರಬ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಸಿಬಿಐ ಅಧಿಕಾರಿಗಳು ಮನವಿ ಮಾಡಿದ್ದಾರೆ. ನೀರವ್ ಮೋದಿ ಸಹೋದರ ನಿಶಾಲ್ ಮೋದಿ ಬೆಲ್ಜಿಯನ್ ನಾಗರೀಕತ್ವ ಹೊಂದಿದ್ದಾನೆ.
SCROLL FOR NEXT