ಮುಂಬೈ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಷಹಾರ ಸೇವಿಸಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ ಮತ್ತು 40 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಖಾಲಾಪುರ್ ಬಳಿಯ ಮಹಾದ್ ಗ್ರಾಮದಲ್ಲಿ ಸುಭಾಶ್ ಮಾನೆ ಎಂಬುವವರ ಗೃಹ ಪ್ರವೇಶ ಸಮಾರಂಭಲ್ಲಿ ಈ ಘಟನೆ ನಡೆದಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಯಗಡ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪರಸ್ಕರ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಮೃತರನ್ನು ಪ್ರಗತಿ ಶಿಂಧೆ(12), ರಿಷಿಕೇಶ್ ಶಿಂಧೆ (12), ಕಲ್ಯಾಣಿ ಶಿಂಘೋಟೆ (7) ಎಂದು ಗುರುತಿಸಲಾಗಿದೆ. ಅಸ್ವಸ್ಥರ ಪೈಕಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.
ಆಹಾರದಲ್ಲಿ ರಾಸಾಯನಿಕ ಕೀಟನಾಶಕ ಸೇರಿರುವುದೇ ಜನರು ಅಸ್ವಸ್ಥಗೊಳ್ಳಲು ಕಾರಣ ಎಂದು ವೈದ್ಯರು, ಪೊಲೀಸರು ತಿಳಿಸಿದ್ದಾರೆ.
ಗೃಹ ಪ್ರವೇಶದಲ್ಲಿ ಒಟ್ಟು 500 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರ ಮಕ್ಕಳು ಹೊಟ್ಟೆ ನೋವು ಎಂದು ನರಳಾಡಿದರು. ಬಳಿಕ ದೊಡ್ಡವರಿಗೂ ಹೊಟ್ಟೆನೋವು, ವಾಂತಿ ಆರಂಭವಾಯಿತು. ಅಸ್ವಸ್ಥಗೊಂಡ 40 ಮಂದಿಯನ್ನು ಕೊಪೋಲಿಯಲ್ಲಿರುವ ಪಾರ್ವತಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರೋಗಿಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.