ಶ್ರೀನಗರ: ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ(ಪಿಡಿಪಿ) ಅಧಿಕಾರಕ್ಕಾಗಿ ಬಿಜೆಪಿ ಜತೆ ಕೈಜೋಡಿಸಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮರಸ್ಯ ಸ್ಥಾಪಿಸುವುದಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗಿತ್ತು ಎಂದು ಕಣಿವೆ ರಾಜ್ಯದ ಹಂಗಾಮಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಮಂಗಳವಾರ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ಹೊರನಡೆದ ಹಿನ್ನೆಲೆಯಲ್ಲಿ ಇಂದು ರಾಜ್ಯಪಾಲ ಎನ್ ಎನ್ ವೊಹ್ರಾ ಅವರಿಗೆ ರಾಜಿನಾಮೆ ನೀಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಫ್ತಿ, ನಾನು ರಾಜ್ಯಪಾಲರಿಗೆ ರಾಜಿನಾಮೆ ನೀಡಿದ್ದೇನೆ. ಮತ್ತೆ ಯಾವುದೇ ಮೈತ್ರಿಯಾಗಿ ನಾವು ಎದುರು ನೋಡುತ್ತಿಲ್ಲ ಎಂದರು.
ನಾವು ಅಧಿಕಾರಕ್ಕಾಗಿ ಬಿಜೆಪಿ ಜತ ಮೈತ್ರಿ ಮಾಡಿಕೊಂಡಿರಲಿಲ್ಲ. ಬಲ ಪ್ರಯೋಗ ಇಲ್ಲಿ ಕೆಲಸ ಮಾಡುವುದಿಲ್ಲ ಮತ್ತು ಇದು ಶತ್ರುವಿನ ಪ್ರದೇಶವಲ್ಲ ಎಂದು ನಿರ್ಗಮಿತ ಸಿಎಂ ಹೇಳಿದ್ದಾರೆ.
ಬಿಜೆಪಿ ಬೆಂಬಲ ಹಿಂಪಡೆದಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಈ ಮೈತ್ರಿ ಏಕಪಕ್ಷೀಯ ಕದನ ವಿರಾಮ, ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಭೇಟಿ ಮತ್ತು 11 ಸಾವಿರ ಯುವಕರ ಮೇಲಿನ ಪ್ರಕರಣ ಹಿಂಪಡೆಯಲು ದೊಡ್ಡ ಪ್ರೇರಣೆಯಾಯಿತು ಎಂದು ಮುಫ್ತಿ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಯಾವುದೇ ವಾಗ್ದಾಳಿ ನಡೆಸದ ಮೆಹಬೂಬ ಮುಫ್ತಿ, ಮೈತ್ರಿ ಮುರಿದುಕೊಂಡಿದ್ದು ಬಿಜೆಪಿಯ ನಿರ್ಧಾರ ಎಂದಿದ್ದಾರೆ.