ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ: ಹಿರಿಯ ಆಡಳಿತಾಧಿಕಾರಿಗಳು, ಭದ್ರತಾಪಡೆಗಳೊಂದಿಗೆ ವೊಹ್ರಾ ಸಭೆ
ಶ್ರೀನಗರ; ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದಕ್ಕೆ ಪಡೆದ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರಿದ ಬೆನ್ನಲ್ಲೇ, ರಾಜ್ಯಪಾಲ ಎನ್ಎನ್ ವೊಹ್ರಾ ಅವರು ಹಿರಿಯ ಆಡಳಿತಾಧಿಕಾರಿಗಳು ಹಾಗೂ ಭದ್ರತಾ ಪಡೆಗಳೊಂದಿಗೆ ಸಭೆ ನಡೆಸುತ್ತಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಸಭೆ ನಡೆಸುತ್ತಿರುವ ರಾಜ್ಯಪಾಲರು, ಕಾಶ್ಮೀರದಲ್ಲಿನ ಪರಿಸ್ಥಿತಿ, ಭದ್ರತೆ ಹಾಗೂ ಆಡಳಿತದ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಪ್ರತಿಪಕ್ಷಗಳಿಂದ ಅಪವಿತ್ರ ಮೈತ್ರಿ ಎಂದೇ ಕರೆಯಲ್ಪಡುತ್ತಿದ್ದ ಹಾಗೂ ಕಣಿವೆ ರಾಜ್ಯದಲ್ಲಿ ನಡೆಯುತ್ತಿದ್ದ ವ್ಯಾಪಕ/ಹಿಂಸೆ/ಭಯೋತ್ಪಾದಕ ಚಟುವಟಿಕೆಗಳಿಂದ ತೀವ್ರ ಟೀಕೆಗೆ ಟೀಕೆಗೆ ಗುರಿಯಾಗಿದ್ದ ಜಮ್ಮು-ಕಾಶ್ಮೀರದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಪತನಗೊಂಡಿದ್ದು, ರಾಜ್ಯಪಾಲರ ಆಡಳಿತವನ್ನು ಹೇರಲಾಗಿದೆ.
ರಾಜ್ಯದಲ್ಲಿ ಉಗ್ರವಾದ ಮಿತಿಮೀರಿದ್ದು, ರಾಜ್ಯದಲ್ಲಿನ ಪರಿಸ್ಥಿತಿ ಅಸಹನೀಯವಾಗಿದೆ ಎಂದು ಬಿಜೆಪಿ ನಿನ್ನೆಯಷ್ಟೇ ದಿಢೀರನೇ ಬೆಂಬಲ ವಾಪಸ್ ಪಡೆದುಕೊಂಡಿತ್ತು. ಇದರಂತೆ 4 ವರ್ಷಗಳ ಹಳೆಯ ದೋಸ್ತಿ ಸರ್ಕಾರದ ಆಳ್ವಿಕೆ ಅಂತ್ಯಗೊಂಡಿದೆ. ಅಲ್ಲದೆ, ಯಾವುದೇ ಇತರೆ ಪಕ್ಷಗಳು ಹೊಂದಾಣಿಕೆಗೆ ಮುಂದಾಗದ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲಾಗಿದೆ.