ಕಾಶ್ಮೀರ ವಿಷಯದಲ್ಲಿ ಮುಷರಫ್ ಬೆಂಬಲಕ್ಕೆ ನಿಂತ ಕಾಂಗ್ರೆಸ್!
ನವದೆಹಲಿ: ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಬೆಂಬಲಕ್ಕೆ ನಿಲ್ಲುವ ಮೂಲಕ ಕಾಂಗ್ರೆಸ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
"ಪರ್ವೇಜ್ ಮುಷರಫ್ ಕಾಶ್ಮೀರ ವಿಷಯದಲ್ಲಿ ಸರಿಯಾಗಿ ಹೇಳಿದ್ದರು. ಕಾಶ್ಮೀರಿಗಳಿಗೆ ಅವಕಾಶ ನೀಡಿದರೆ ಅವರು ಸ್ವತಂತ್ರರಾಗಿರುವುದಕ್ಕೆ ಬಯಸುತ್ತಾರೆ ಎಂದು ಮುಷರಫ್ ಹೇಳಿದ್ದು ಸರಿಯಾಗಿತ್ತು ಎಂದು ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಹೇಳಿದ್ದಾರೆ.
ಸೈಫುದ್ದೀನ್ ಸೋಜ್ ಅವರ ಕಾಶ್ಮೀರ: ಗ್ಲಿಂಪ್ಸಸ್ ಆಫ್ ಹಿಸ್ಟರಿ ಹಾಗೂ ಸ್ಟೋರಿ ಆಫ್ ಸ್ಟ್ರಗಲ್ ಪುಸ್ತಕ ಮುಂದಿನ ವಾರ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ಮುಷರಫ್ ಹೇಳಿಕೆಯನ್ನು ಸಮರ್ಥಿಸಿಕೊಂಡು ವಿವಾದಕ್ಕೀಡಾಗಿದ್ದಾರೆ.
"ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ವಿಲೀನವಾಗಲು ಬಯಸುತ್ತಿಲ್ಲ, ಅವರಿಗೆ ಅವಕಾಶ ಸಿಕ್ಕಿದರೆ ಸ್ವಯತ್ತತೆಯೇ ಅವರ ಆಯ್ಕೆಯಾಗಿರಲಿದೆ ಎಂದು ಮುಷರಫ್ ಹೇಳಿದ್ದರು. ಈ ಹೇಳಿಕೆ ಸಾರ್ವಕಾಲಿಕ ಸತ್ಯ, ನಾನೂ ಸಹ ಅದನ್ನ ಬೆಂಬಲಿಸುತ್ತೇನೆ, ಆದರೆ ಆ ರೀತಿಯಾಗುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೋಜ್ ಹೇಳಿದ್ದಾರೆ.
ಕಾಶ್ಮೀರಿಗಳಿಗೆ ಸ್ವಾತಂತ್ರ್ಯ ಸಿಕ್ಕಿದರೆ ಅವರು ಪಾಕಿಸ್ತಾನದೊಂದಿಗೆ ವಿಲೀನವಾಗುವುದಿಲ್ಲ, ಅವರು ಪ್ರತ್ಯೇಕವಾಗಿಯೇ ಉಳಿಯಲಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಇರುವುದು ಅದೊಂದೇ ಮಾರ್ಗ ಎಂದು 2007 ರಲ್ಲಿ ಪರ್ವೇಜ್ ಮುಷರಫ್ ಹೇಳಿದ್ದನ್ನು ಸೈಫುದ್ದೀನ್ ಉಲ್ಲೇಖಿಸಿದ್ದಾರೆ.