ನವದೆಹಲಿ; ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ರೂ.3,277 ಕೋಟಿ ಮೌಲ್ಯದ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವರ್ತಿ ಕಾಲ್ರೋ ವ್ಯಾಲೆಂಟಿನೋ ಗೆರೋಸಾನನ್ನು ಭಾರತಕ್ಕೆ ಕಳುಹಿಸಲು ಇಟಲಿ ಶುಕ್ರವಾರ ನಿರಾಕರಿಸಿದೆ.
ಇಟಲಿಯ ಈ ನಿರ್ಧಾರ ಹೆಲಿಕಾಪ್ಟರ್ ಹಗರಣ ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡಕ್ಕೆ ಭಾರೀ ಹಿನ್ನಡೆಯುಂಟಾದಂತಾಗಿದೆ.
ಗೆರೋಸಾನನ್ನು ಭಾರತಕ್ಕೆ ಕಳುಹಿಸಲು ಇಟಲಿ ಸರ್ಕಾರ ನಿರಾಕರಿಸಿರುವ ಕುರಿತಂತೆ ಸ್ವತಃ ಸಿಬಿಐ ಖಚಿತಪಡಿಸಿದ್ದು, ಭಾರತದ ವಿದೇಶಾಂಗ ಸಚಿವಾಲಯದ ಮೂಲಕ ಈ ಬಗ್ಗೆ ಇಟಲಿಗೆ ಮತ್ತೊಮ್ಮೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದೆ.
ಗೆರೋಸಾ ವಿರುದ್ಧ ಸಿಬಿಐ ಹೊರಡಿಸಿದ್ದ ರೆಡ್ ಕಾರ್ನರ್ ನೋಟಿಸ್ ಪರಿಣಾಮ, ಇಟಲಿ ಸರ್ಕಾರ ಗೆರೋಸಾನನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಂಧನಕ್ಕೊಳಪಡಿಸಿತ್ತು.
ಈ ಸಂಬಂಧದ ವಿಚಾರಣೆಗಾಗಿ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಸಿಬಿಐ ಇಟಲಿಗೆ ಮನವಿ ಮಾಡಿಕೊಂಡಿತ್ತು. ಅಲ್ಲದೆ, ಈ ಪ್ರಕರಣದಲ್ಲಿ ಭಾರತದ ಯಾವೆಲ್ಲಾ ರಾಜಕಾರಣಿಗಳು, ವಾಯುಪಡೆಯ ಮಾಜಿ ಮುಖ್ಯಸ್ಥ ಕೆ.ಸಿ.ತ್ಯಾಗಿ ಸೇರಿದಂತೆ ಐಎಎಪ್, ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಇತರೆ ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಹಾಗೂ ಭಾರತದ ಯಾವೆಲ್ಲಾ ವ್ಯಕ್ತಿಗಳಿಗೆ ಲಂಚ ನೀಡಲಾಗಿದೆ ಎಂಬುದರ ಮಾಹಿತಿಗಳನ್ನು ಭೇದಿಸುವುದು ಗೆರೋಸಾ ವಿಚಾರಣೆಯಿಂದ ಮಾತ್ರ ಸಾಧ್ಯ ಎಂದು ಸಿಬಿಐ ಪ್ರತಿಪಾದಿಸಿತ್ತು.