ಶ್ರೀನಗರ: ಯುಪಿಎ ಸರ್ಕಾರದ ಅವಧಿಗಿಂತಲೂ ತಮ್ಮ ಸರ್ಕಾರ ಅತೀ ಹೆಚ್ಚು ಉಗ್ರರನ್ನು ಕೊಂದು ಹಾಕಿದ್ದೇವೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ ಆ ಮೂಲಕ ಉಗ್ರರಿಗೆ ಮತ್ತಷ್ಟು ವಿಧ್ವಂಸಕ ಕೃತ್ಯ ನಡೆಸಲು ಆಹ್ಲಾನ ನೀಡುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, ಎನ್ ಡಿಎ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಅತೀ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಬೀಗುತ್ತಿದೆ. ಆದರೆ ಉಗ್ರರ ಕೊಲ್ಲುವುದೊಂದೇ ಸಾಧನೆಯಲ್ಲ. ಅತೀ ಹೆಚ್ಚಿನ ಪ್ರಮಾಣದಲ್ಲಿ ಉಗ್ರರರನ್ನು ಕೊಂದೆ ಎಂದು ಹೇಳುವ ಮೂಲಕ ಎನ್ ಡಿಎ ಸರ್ಕಾರ ಮತ್ತಷ್ಟು ಉಗ್ರ ದಾಳಿಗೆ ಪ್ರೇರೇಪಣೆ ನೀಡುತ್ತಿದೆ ಎಂದು ಹೇಳಿದ್ದಾರೆ.
ಅಂತೆಯೇ ಆದರೆ ನನಗೆ ಒಂದು ಅರ್ಥವಾಗುತ್ತಿಲ್ಲ ಅದು ಹೇಗೆ ನಿಮ್ಮ ಸರ್ಕಾರ ಅತೀ ಹೆಚ್ಚು ಉಗ್ರರು ದೇಶದ ಗಡಿ ಗಾಟಿ ಒಳಗೆ ಬರಲು ಅನುವು ಮಾಡಿಕೊಟ್ಟಿತು ಎಂದು ಟಾಂಗ್ ನೀಡಿದ್ದಾರೆ. ಅಲ್ಲದೆ ಭಾರತೀಯ ಸೇನೆಯ ಸೈನಿಕರು ಮತ್ತು ಜಮ್ಮು ಮತ್ತು ಕಾಶ್ಮೀರ ಸೇನಾಪಡೆಗಳಿಗೆ ಹೆಚ್ಚು ಉಗ್ರರನ್ನು ಕೊಲ್ಲುವಂತೆ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಜಮ್ಮು ಕಾಶ್ಮೀರ ಭದ್ರಾತಾ ವಿಚಾರದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದರು. ಅದರಂತೆ ಯುಪಿಎ ಸರ್ಕಾರದ ಅವಧಿಗಿಂತ ಎನ್ ಡಿಎ ಅವಧಿಯಲ್ಲಿ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಮಾಹಿತಿ ನೀಡಿದ್ದರು. ಈ ಪೈಕಿ ಯುಪಿಎ ಅವಧಿಯಲ್ಲಿ ಅಂದರೆ 2012ರಲ್ಲಿ 72 ಮಂದಿ, 2013ರಲ್ಲಿ 67 ಮಂದಿ ಮತ್ತು 2013ರಲ್ಲಿ 110 ಮಂದಿ ಉಗ್ರರನ್ನು ಕೊಲ್ಲಲಾಗಿತ್ತು. ಆದರೆ ಎನ್ ಡಿಎ ಸರ್ಕಾರ ಅಧಿಕಾರಕ್ಕೇರಿದ ಬಳಿಕ 2015ರಲ್ಲಿ 108, 2016ರಲ್ಲಿ 150 ಮಂದಿ, 2017ರಲ್ಲಿ 217 ಮಂದಿ ಉಗ್ರರನ್ನು ಕೊಲ್ಲಲಾಗಿದೆ. ಇನ್ನು 2018ರ ಮೇ ತಿಂಗಳವರೆಗೂ 75 ಮಂದಿ ಉಗ್ರರನ್ನು ಕೊಂದು ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದರು.