ನವದೆಹಲಿ; ಹಿಂದು-ಮುಸ್ಲಿಂ ದಂಪತಿಗಳಿಗೆ ಕಿರುಕುಳ ನೀಡಿದ ಆರೋಪವನ್ನು ಎದುರಿಸಿರುವ ಲಖನೌ ಪಾಸ್ ಪೋರ್ಟ್ ಅಧಿಕಾರಿಗೆ ಉತ್ತರಪ್ರದೇಶದ ಶಿವಸೇನೆ ಘಟಕ ಬೆಂಬಲ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಅನಿಲ್ ಸಿಂಗ್ ಅವರು ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅವರನ್ನು ಭೇಟಿ ಮಾಡಿದ್ದು, ಪಾಸ್ ಪೋರ್ಟ್ ಅಧಿಕಾರಿ ವಿಕಾಸ್ ಮಿಶ್ರಾ ಅವರ ವರ್ಗಾವಣೆ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ.
ವಿಕಾಸ್ ಮಿಶ್ರಾ ಅವರು ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ. ಅಧಿಕಾರಿಯನ್ನು ವರ್ಗಾವಣೆ ಮಾಡುತ್ತಿರುವುದು ನಿಜಕ್ಕೂ ಸರಿಯಲ್ಲ. ಇದು ವಿದೇಶಾಂಗ ಸಚಿವಾಲಯ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತದೆ. ಹಲವು ಭಾರತೀಯರು ಪಾಸ್ ಪೋರ್ಟ್ ಗಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದರೆ, ತನ್ವಿ ಸೇಠ್ ಹಾಗೂ ಅವರ ಪತಿಗೆ ಕೆಲವೇ ದಿನಗಳಲ್ಲಿ ಪಾಸ್'ಪೋರ್ಟ್ ನೀಡಲಾಗಿದೆ ಎಂದು ಹೇಳಿದ್ದಾರೆ.
ದಂಪತಿಗಳಿಗೆ ಪಾಸ್'ಪೋರ್ಟ್ ನೀಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಸ್ಲಿಮರನ್ನು ಸಮಾಧಾನ ಪಡಿಸುವ ಯತ್ನ ಮಾಡಿದೆ. ಇದು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದು, ಪ್ರಕರಣ ಸಂಬಂಧ ವಿಕಾಸ್ ಮಿಶ್ರಾ ಅವರಿಗೆ ನಾವು ಬೆಂಬಲ ನೀಡುತ್ತೇವೆಂದು ತಿಳಿಸಿದ್ದಾರೆ.