ದುಬೈ: ವಿವಿಧ ಪ್ರಕರಣಗಳಲ್ಲಿ ಸಿಲುಕಿ ದುಬೈನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 93 ಮಂದಿ ಭಾರತೀಯರನ್ನು ವ್ಯಕ್ತಿಯೋರ್ವ ರಕ್ಷಿಸಿ ಭಾರತಕ್ಕೆ ವಾಪಸ್ ಕರೆತಂದಿರುವ ಮೂಲಕ ಕುಟುಂಬಸ್ಥರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕೊಲೆ ಮತ್ತು ಸುಲಿಗೆ ಆರೋಪದಲ್ಲಿ ಯುಎಇಯಲ್ಲಿ ಮರಣದಂಡನೆ ಮತ್ತು ಕಠಿಣ ಶಿಕ್ಷೆಗೆ ಗುರಿಯಾಗಿದ್ದ 15 ಮಂದಿ ಭಾರತೀಯರನ್ನು ರಕ್ಷಿಸಿ ಭಾರತಕ್ಕೆ ವಾಪಸ್ ಕರೆತರಲಾಗಿದ್ದು, ಅವರ ಪೈಕಿ 14 ಮಂದಿ ಪಂಜಾಬಿಗಳು ಎನ್ನುವುದು ಬಹಿರಂಗವಾಗಿದೆ. ದುಬೈನಲ್ಲಿ ನೆಲೆಸಿರುವ ಹೋಟೆಲ್ ಉದ್ಯಮಿ ಮತ್ತು ದಾನಿ ಎಸ್ ಪಿ ಸಿಂಗ್ ಒಬೆರಾಯ್ ಇವರನ್ನು ರಕ್ಷಿಸಿದ್ದಾರೆ.
ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ 15 ಮಂದಿಯ ಪೈಕಿ 14 ಮಂದಿ ಪಂಜಾಬಿಗಳಾಗಿದ್ದರೆ, ಒಬ್ಬ ವ್ಯಕ್ತಿ ಬಿಹಾರದವನು. ಅವರನ್ನು ದೇಶಕ್ಕೆ ಕರೆತಂದು ಅವರ ಕುಟುಂಬದ ಜತೆಗೆ ಸೇರಿಸಲಾಗಿದೆ.
ದುಬೈನಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಟ್ರಸ್ಟ್
ಒಬೆರಾಯ್ ಒಡೆತನದ ಟ್ರಸ್ಟ್, ದುಬೈ ಮತ್ತು ಅರಬ್ ಸಂಯುಕ್ತ ಒಕ್ಕೂಟದಲ್ಲಿ ನೆಲೆಸಿರುವ ಭಾರತೀಯರು ತೊಂದರೆಗೊಳಗಾದರೆ ಅವರಿಗೆ ಈ ಒಬೆರಾಯ್ ಟ್ರಸ್ಟ್ ನೆರವು ನೀಡುತ್ತದೆ. ಜತೆಗೆ ಅವರು ಈವರೆಗೆ 93 ಮಂದಿ ಭಾರತೀಯರು ಮರಣದಂಡನೆ ಮತ್ತು ಇತರ ಶಿಕ್ಷೆಗಳಿಗೆ ಗುರಿಯಾಗುವುದನ್ನು ತಪ್ಪಿಸಿ ರಕ್ಷಿಸಿದ್ದಾರೆ. ಅದಕ್ಕಾಗಿ ಅಲ್ಲಿನ ನ್ಯಾಯಾಲಯಕ್ಕೆ ದಂಡದ ರೂಪದಲ್ಲಿ 20 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಿದ್ದಾರೆ.
ಸರಿಯಾದ ವೀಸಾ, ಸೂಕ್ತ ವೇತನ ಮತ್ತು ಉದ್ಯೋಗದ ಮಾಹಿತಿಯಿಲ್ಲದೆ ಯುಎಇಗೆ ತೆರಳಿದ್ದ ಹಲವರು ವೇತನ ಸಾಲದಾದಾಗ ದುಷ್ಕೃತ್ಯಕ್ಕೆ ಇಳಿದು, ಹೆಚ್ಚಿನ ಹಣ ಗಳಿಕೆಯ ಉದ್ದೇಶ ಹೊಂದಿದ್ದರು. ಆದರೆ ಅಲ್ಲಿನ ಕಠಿಣ ಕಾನೂನಿನಿಂದಾಗಿ ಶಿಕ್ಷೆಗೆ ಗುರಿಯಾಗಿದ್ದರು.