ಆರ್.ಎಸ್.ಎಸ್. ಕಾರ್ಯಕ್ರಮದಲ್ಲಿ ಪ್ರಣಬ್ ಭಾಗಿ ಹಿನ್ನೆಲೆ: ಸಂಘ ಸೇರಿಕೊಳ್ಳ ಬಯಸುವವರ ಸಂಖ್ಯೆ 5 ಪಟ್ಟು ಹೆಚ್ಚಳ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಆರ್ ಎಸ್ ಎಸ್ ಸೇರ್ಪಡೆಗೆ ಬಯಸುವವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ
ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಆರ್ ಎಸ್ ಎಸ್ ಸೇರ್ಪಡೆಗೆ ಬಯಸುವವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಟಟನೆ ಪಶ್ಚಿಮ ಬಂಗಾಳ ರಾಜ್ಯದ ಮುಖಂಡರು ಹೇಳಿದ್ದಾರೆ.
ಜೂನ್ ಪ್ರಾರಂಭದಲ್ಲಿ ನಾಗ್ಪುರದಲ್ಲಿ ನಡೆದ ಆರ್ ಎಸ್ ಎಸ್ ಸಮಾವೇಶಕ್ಕೆ ಆಗಮಿಸಿದ್ದ ಪ್ರಣಬ್ ಪ್ರಭಾವದಿಂದ ಸಂಘಕ್ಕೆ ಸೇರಲು ಹೆಚ್ಚಿನ ಜನ ಆಸಕ್ತಿ ತಾಳುತ್ತಿದ್ದಾರೆ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇದರ ಪ್ರಮಾಣ ದೇಶದ ಉಳಿದೆಡೆಗಳಿಗಿಂತ ಇನ್ನೂ ಅಧಿಕವಾಗಿದೆ ಎಂದು ಅವರು ಹೇಳಿದ್ದಾರೆ.
ಹಿರಿಯ ಆರ್ ಎಸ್ ಎಸ್ ನಾಯಕ ಬಿಪ್ಲಾಬ್ ರಾಯ್ಮಾತನಾಡಿ ಮುಖರ್ಜಿ ಅವರ ಭಾಷಣದ ತರುವಾಯ ಸಂಘವು ಹಲವು ಅರ್ಜಿಗಳನ್ನು ಸ್ವೀಕರಿಸಿದೆ ಎಂದಿದ್ದಾರೆ.
"ಜೂನ್ 1 ರಿಂದ ಜೂನ್ 6 ರ ವರೆಗೆ, ನಾವು ನಮ್ಮ ವೆಬ್ ಸೈಟಿನಲ್ಲಿ ಆರ್ ಎಸ್ ಎಸ್ ಸೇರುವ ಆಸಕ್ತಿ ಸೂಚಿಸಿರುವ 378 ಅರ್ಜಿಗಳನ್ನು ಸ್ವೀಕರಿಸಿದ್ದೆವು. ಜೂನ್ 7 ರಂದು ಮುಖರ್ಜಿ ನಮ್ಮ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಅಂದು ನಾವು 1,779 ಅರ್ಜಿಗಳನ್ನು ಸ್ವೀಕರಿಸಿದ್ದೆವು.ಅಲ್ಲಿಂದೀಚೆಗೆ ಪ್ರತಿ ದಿನವೂ ನಾವು 1,200-1,300 ವಿನಂತಿಗಳನ್ನು ಸ್ವೀಕರಿಸುತ್ತಿದ್ದೇವೆ ಇದರಲ್ಲಿ ಶೇ.40ರಷ್ಟು ವಿನಂತಿಗಳು ಬಂಗಾಳದಿಂದಲೇ ಬಂದಿದೆ" ಅವರು ಹೇಳಿದ್ದಾರೆ.
ಮುಖರ್ಜಿ ಅವರ್ ಕಾರಣ ಆರ್ ಎಸ್ ಎಸ್ ಜನಪ್ರಿಯತೆ ಹೆಚ್ಚಿಎಯೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಯ್ "ಹಾಗೆಂದುಕೊಳ್ಳುವುದು ಸರಿಯಲ್ಲ, ಆರ್ ಎಸ್ ಎಸ್ ನ ಸಾಮಾಜಿಕ ಕೆಲಸ ಕಾರ್ಯಗಳು ಅದರ ಜನಪ್ರಿಯತೆಗೆ ಕಾರಣ. ಮುಖರ್ಜಿ ತಮ್ಮ ಕಾರ್ಯಕ್ರಮಕ್ಕೆ ಬಂದಿದ್ದರೆನ್ನುವ ಕಾರಣಕ್ಕೆ ಸಂಘಕ್ಕೆ ಸೇರ್ಪಡೆಯಾಗುವವರು ಹೆಚ್ಚುತ್ತಿದ್ದಾರೆ ಎಂದು ಹೇಳುವುದು ತಪ್ಪು" ಎಂದರು.
"ಇದೇ ವೇಳೆ ಮುಖರ್ಜಿ ಅವರ ಮಾತುಗಳ ಬಳಿಕ ಜನರಲ್ಲಿ ಸಂಘದ ಪರ ಆಸಕ್ತಿ ಹೆಚ್ಚಿರುವುದು ಸತ್ಯ, ಇದು ಎಲ್ಲಾ ಕಾರಣಗಳಲ್ಲಿ ಒಂದು" ಅವರು ಹೇಳಿದ್ದಾರೆ.
ಜೂನ್ 7 ರಂದು ಆರ್ ಎಸ್ ಎಸ್ ನಾಗ್ಪುರದ ಶಾಖೆಯಲ್ಲಿ ವಾರ್ಷಿಕ ಸಮಾವೇಶ ಏರ್ಪಾಡಾಗಿದ್ದು ಅದರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.