ಲಖನೌ: 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ, ಬಿಜೆಪಿಯನ್ನು ಬೆಂಬಲಿಸಲು ಶಿಯಾ ಮುಸ್ಲಿಂರು ನಿರ್ಧರಿಸಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಬೆಂಬಲಿತ ಪರಿಷತ್ ಸದಸ್ಯ, ರಾಷ್ಟ್ರೀಯ ಶಿಯಾ ಸಮಾಜ (ಆರ್ಎಸ್ಎಸ್) ಮುಖ್ಯಸ್ಥ ಬುಕ್ಕಲ್ ನವಾಜ್ ಅವರು, ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದರ ಜತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದರ ಪರವಾಗಿ ನಾವು ಇದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಸಮುದಾಯ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಸ್ಥಾನವನ್ನು ಅಲಂಕರಿಸುವುದನ್ನು ಬಯಸುತ್ತದೆ. ಬಿಜೆಪಿಯನ್ನು ಹೊರತುಪಡಿಸಿದರೆ ಮತ್ಯಾವ ಪಕ್ಷವೂ ಶಿಯಾ ಮುಸ್ಲಿಂರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿ ಶಿಯಾ ಸಮುದಾಯ ಏರ್ಪಡಿಸುವ ಮೆರವಣಿಗೆ ಮೇಲೆ 20 ವರ್ಷಗಳಿಂದ ಇದ್ದ ನಿರ್ಬಂಧವನ್ನು ತೆಗೆದುಹಾಕಿದ್ದರು ಎಂದು ನವಾಜ್ ನೆನಪಿಸಿಕೊಂಡರು.
ಇನ್ನು ಬಿಜೆಪಿ ಸರ್ಕಾರವು ಶಿಯಾ ಸಮುದಾಯದ ಮುಖಂಡರಾದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ರಾಜ್ಯ ಸಚಿವ ಮೊಹ್ಸಿನ್ ರಾಜಾ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಹಸನ್ ರಿಜ್ವಿ, ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಹೈದರ್ ಅಬ್ಬಾಸ್ ಅವರಿಗೆ ಗೌರವಯುತ ಸ್ಥಾನಗಳನ್ನು ನೀಡಿದೆ ಎಂದು ನವಾಜ್ ಹೇಳಿದ್ದಾರೆ.