ಮಧ್ಯ ಪ್ರದೇಶ: ಕಪ್ಪೆಗಳ ಮದುವೆ ಮಾಡಿಸಿದ್ದ ಸಚಿವರ ವಿರುದ್ಧ ದೂರು ದಾಖಲು
ಭೋಪಾಲ್(ಮಧ್ಯ ಪ್ರದೇಶ): ಮಳೆ ಬರಲೆಂದು ಕಪ್ಪೆಗಳ ಮದುವೆ ಮಾಡಿಸಿದ್ದ ಸಚಿವರೊಬ್ಬರಿಗೆ ಈಗ ಅದೇ ಮದುವೆ ಸಂಕಟ ತಂದೊಡ್ಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯ ಪ್ರದೇಶ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಸಚಿವೆ ಲಲಿತಾ ಯಾದವ್ ಎರಡು ದಿನಗಳ ಹಿಂದೆ ಮಳೆಗಾಗಿ ಕಪ್ಪೆಗಳ ಮದುವೆ ಆಯೋಜಿಸಿದ್ದರು. ವರುಣನನ್ನು ಮೆಚ್ಚಿಸುವ ಸಲುವಾಗಿ ಭರತ್ ಪುರದ ದೇವಸ್ಥಾನವೊಂದರಲ್ಲಿ ಕಪ್ಪೆಗಳ ವಿವಾಹ ಕಾರ್ಯಕ್ರಮ ನಡೆದಿತ್ತು.
ಸಚಿವೆ ಸೇರಿ ನೂರಾರು ಜನ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಕಪ್ಪೆಗಳ ಮೇಲೆ ಕ್ರೌರ್ಯ ಎಸಗಿದ್ದಾರೆ, ಹೀಗೆ ಪ್ರಾಣಿಗಳ ಮೇಲೆ ದೌರ್ಜನ್ಯಕ್ಕೆ ಮುಂದಾದವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕುಎಂದು ಸ್ವಯಂಸೇವಾ ಸಂಘಟನೆಯೊಂದು ಪೋಲೀಸ್ ದೂರು ದಾಖಲಿಸಿದೆ.
ಪ್ರಾಣಿಗಳ ಹಕ್ಕು ಹೋರಾಟ ಸಂಸ್ಥೆಯ ಕಾರ್ಯಕರ್ತರಾದ ನರೇಶ್ ಕದ್ಯಾನ್ ಈ ಕುರಿತಂತೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಕಪ್ಪೆಗಳ ಮದುವೆ ಕಾರ್ಯಕ್ರಮಗಳನ್ನು ತಡೆಯಬೇಕು. ಹಾಗೆಯೇ ಇಂತಹಾ ಕಾರ್ಯಕ್ರಮ ಅಆಯೋಜಿಸುವವರ ಮೇಲೆ, ಸ್ಥಳದಲ್ಲಿ ಹಾಜರಿದ್ದ ಸಚಿವೆ, ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಚಿವೆ ಲಲಿತಾ ಅವರಿಗೆ ಈ ಪ್ರಕರಣದ ಸಂಬಂಧ ಕನಿಷ್ಠ 3 ವರ್ಷ ಜೈಲು ವಾಸದ ಶಿಕ್ಷೆ ನಿಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕಪ್ಪೆಗಳ ಮದುವೆ ಸಂಬಂಧ ಈ ಪ್ರಕರಣವನ್ನು ಸಾಕ್ಷಿಯಾಗಿರಿಸಿಕೊಂಡು ನ್ಯಾಯಾಲಯದ ವಾದ ಇತ್ಯರ್ಥವಾಗುವವ್ರೆಗೆ ಎಲ್ಲಿಯೂ ಕಪ್ಪೆ ಮದುವೆ ನಡೆಯದಂತೆ ಪೋಲೀಸರು ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಾರೆ.
ಕಪ್ಪೆ ಮದುವೆ ಎನ್ನುವ ಮೂಲಕ ಎರಡು ಕಪ್ಪೆಗಳಿಗೆ ಹಿಂಸೆ ನೀಡಲಾಗಿದೆ, ಇದು ಪ್ರಾಣಿ ಹಿಂಸೆ ತಡೆ ಕಾಯಿದೆ 1960ರ ಸೆಕ್ಷನ್ 3 ಮತ್ತು 11ರ ಉಲ್ಲಂಘನೆಯಾಗುತ್ತದೆ ಎಂದು ನರೇಶ್ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics