ಕಾಂಗ್ರೆಸ್ ಹಿರಿಯ ನಾಯಕ ಸೈಫುದ್ದೀನ್ ಸೊಜ್
ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಹೈದರಾಬಾದ್ ಬದಲಿಗೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಮುಂದಾಗಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಸೈಫುದ್ದೀನ್ ಸೊಜ್ ಅವರು ಹೇಳಿದ್ದಾರೆ.
ಕಾಶ್ಮೀರ ಗ್ಲಿಂಪ್ಸಸ್ ಆಫ್ ಹಿಸ್ಟರಿ ಹಾಗೂ ಸ್ಟೋರಿ ಆಫ್ ಸ್ಟ್ರಗಲ್ ಎಂಬ ಪುಸ್ತಕವನ್ನು ಸೈಫುದ್ದೀನ್ ಸೊಜಿಯವರು ಬರೆದಿದ್ದು, ಇಂದು ಪುಸ್ತಕ ಬಿಡುಗಡೆ ಸಮಾರಂಭ ನಡೆದಿದೆ. ಸಮಾರಂಭದಲ್ಲಿ ಮಾತನಾಡಿರುವ ಅವರು, ಸರ್ದಾರ್ ಪಟೇಲರು ವಾಸ್ತವಿಕವಾದಿಯಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಪಟೇಲರು ಅಂದಿನ ಪಾಕಿಸ್ತಾನ ಪ್ರಧಾನಮಂತ್ರಿ ಲಿಖತ್ ಅಲಿ ಖಾನ್ ಅವರಿಗೆ, ಹೈದರಾಬಾದ್ ಬದಲಿಗೆ ಕಾಶ್ಮೀರ ನೀಡುವುದಾಗಿ ತಿಳಿಸಿದ್ದರು ಎಂದು ಹೇಳಿದ್ದಾರೆ.
ಲಿಖಿತ್ ಖಾನ್ ಯುದ್ಧಕ್ಕೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಸರ್ದಾರ್ ಪಟೇಲರು ಯುದ್ಧವನ್ನು ಬಯಸಿರಲಿಲ್ಲ. ಯುದ್ಧ ಬಯಸದ ಪಟೇಲರು ಕಾಶ್ಮೀರವನ್ನು ತೆಗೆದುಕೊಳ್ಳಿ, ಹೈದಾಬಾದ್ ಬಗ್ಗೆ ಮಾತನಾಡಿ ಎಂದು ಲಿಖತ್ ಅಲಿ ಖಾನ್ ಅವರಿಗೆ ತಿಳಿಸಿದ್ದರು ಎಂದು ಸೊಜಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸೈಫುದ್ದೀನ್ ಸೊಜಿ ಮುಷರಫ್ ಹೇಳಿಕೆಗೆ ಬೆಂಬಲ ನೀಡಿದ್ದರು. "ಪರ್ವೇಜ್ ಮುಷರಫ್ ಕಾಶ್ಮೀರ ವಿಷಯದಲ್ಲಿ ಸರಿಯಾಗಿ ಹೇಳಿದ್ದರು. ಕಾಶ್ಮೀರಿಗಳಿಗೆ ಅವಕಾಶ ನೀಡಿದರೆ ಅವರು ಸ್ವತಂತ್ರರಾಗಿರುವುದಕ್ಕೆ ಬಯಸುತ್ತಾರೆ ಎಂದು ಮುಷರಫ್ ಹೇಳಿದ್ದು ಸರಿಯಾಗಿತ್ತು ಎಂದು ಹೇಳಿದ್ದರು. ಈ ಹೇಳಿಕೆ ಭಾರಿ ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿತ್ತು.