ನವದೆಹಲಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ವಂಚಿಸಿ ವಿದೇಶದಲ್ಲಿರುವ ಮದ್ಯ ಉದ್ಯಮಿ ವಿಜಯ್ ಮಲ್ಯನನ್ನು ಜಾರಿ ನಿರ್ದೇಶನಾಲಯ ದೇಶಭ್ರಷ್ಟ ಅಪರಾಧಿ ಎಂದು ಘೋಷಿಸಿದ್ದ ಬೆನ್ನಲ್ಲೇ ತನ್ನ ಒಡೆತನದಲ್ಲಿರುವ 13,900 ಕೋಟಿ ರೂ ಮೌಲ್ಯದ ಆಸ್ತಿ ಮಾರಾಟ ಮಾಡಿ, ಸಾಲ ತೀರಿಸುವುದಾಗಿ ವಿಜಯ್ ಮಲ್ಯ ಹೇಳಿದ್ದಾರೆ.
ರಾಜಕೀಯ ಉದ್ದೇಶದಿಂದ ತಮ್ಮನ್ನು ಬಲಿಪಶು ಮಾಡಲಾಗಿದ್ದು,ಬ್ಯಾಂಕುಗಳಿಗೆ ಸಾಲ ವಂಚನೆ ಹೆಸರಿನಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವಂತೆ ಮಾಡಲಾಗಿದೆ ಎಂದು ವಿಜಯ್ ಮಲ್ಯ ಆರೋಪಿಸಿದ್ದಾರೆ.
ಸಾಲ ಮರುಪಾವತಿ ಮಾಡಲು ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ತಮ್ಮ ಆಸ್ತಿಪಾಸ್ತಿ ಮಾರಾಟ ಮಾಡಲು ಅನುಮತಿ ನೀಡುವಂತೆ ಯುನೈಟೆಡ್ ಬ್ರಿವೆರೀಸ್ ಹೊಲ್ಡಿಂಗ್ ಕಂಪನಿ ಜೂನ್. 22 ರಂದು ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿರುವುದಾಗಿ ಎಂದು ಅವರು ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ತಮ್ಮ ಒಡೆತನದಲ್ಲಿರುವ ಆಸ್ತಿ ಮಾರಾಟ ಮಾಡಿ ಸಾರ್ವಜನಿಕ ಬ್ಯಾಂಕುಗಳ ಸಾಲ ಮರುಪಾವತಿಸಲು ನ್ಯಾಯಾಲಯ ಅನುಮತಿ ನೀಡಬೇಕು. ಅಂತೆಯೇ ಸಿಬಿಐ ಹಾಗೂ ಜಾರಿನಿರ್ದೇಶನಾಲಯಕ್ಕೂ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.