ಲಖನೌ: ವಿಶ್ವವಿಖ್ಯಾತ ಪ್ರವಾಸಿ ತಾಣ ತಾಜ್ ಮಹಲ್ ಶಿವನ ಮಂದಿರವಾಗಿದ್ದರೆ ಅದನ್ನು ಖಂಡಿತಾ ಕೆಡವಿ ಹಾಕಬೇಕು.. ಹೀಗಾಗಿ ಮೊದಲ ಇಟ್ಟಿಗೆಯನ್ನು ಸಿಎಂ ಯೋಗಿ ಆದಿತ್ಯಾನಾಥ್ ಕಿತ್ತು ಹಾಕಿದರೆ ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ಗುಲಾಮ ಗಿರಿಯ ಗುರುತು ನಮಗೇಕೆ ಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವ್ಯಂಗ್ಯ ಮಾಡಿದ್ದಾರೆ.
ಸದಾ ತಮ್ಮ ವಿಚಿತ್ರ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುವ ಸಮಾಜವಾದಿ ಮುಖಂಡ ಅಜಂಖಾನ್ ಇದೀಗ ಮತ್ತೊಂದು ಹೇಳಿಕೆ ಮೂಲಕ ಸುದ್ದಿಗೆ ಗ್ರಾಸವಾಗಿದ್ದು, ಪ್ರಪಂಚದ ಅದ್ಬುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ಕೆಡವಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರಿಗೆ ತಿರುಗೇಟು ನೀಡಿರುವ ಅಜಂಖಾನ್, 'ತಾಜ್ ಮಹಲ್ ನಿಜಕ್ಕೂ ಶಿವನ ಮಂದಿರವೇ ಆಗಿದ್ದರೆ ಅದನ್ನು ಖಂಡಿತಾ ಕೆಡವಿ ಹಾಕಬೇಕು. ಹೀಗಾಗಿ ಸಿಎಂ ಯೋಗಿ ಆದಿತ್ಯಾನಾಥ್ ಅವರ ವಾದವನ್ನು ನಾನು ಒಪ್ಪುತ್ತೇನೆ. ಅಂತೆಯೇ ಯೋಗಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದ್ದು. ತಾಜ್ ಮಹಲ್ ಕೆಡವಲು ಅವರೊಂದಿಗೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆ.
'ತಾಜ್ ಮಹಲ್ ಕೆಡವಿ ಹಾಕುವ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ತಾಜ್ ಮಹಲ್ ನ ಮೊದಲ ಇಟ್ಟಿಗೆಯನ್ನು ಅವರು ಕಿತ್ತುಹಾಕಲಿ, ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ನಾನಷ್ಚೇ ಅಲ್ಲ ನನ್ನ ಸಮುದಾಯ ಸುಮಾರು 20 ಸಾವಿರ ಮಂದಿ ಈ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ. ಯೋಗಿ ಆದಿತ್ಯಾನಾಥ್ ಅವರು ತಾಜ್ ಮಹಲ್ ಅನ್ನು ಗುಲಾಮಗಿರಿಯ ಸಂಕೇತ ಎಂದು ಹೇಳುತ್ತಿದ್ದಾರೆ. ಗುಲಾಮಗಿರಿಯ ಸಂಕೇತ ನಮಗೇಕೆ ಬೇಕು. ಅದನ್ನು ಕೂಡಲೇ ಕೆಡವಿ ಹಾಕೋಣ ಎಂದು ಅಜಂಖಾನ್ ವ್ಯಂಗ್ಯವಾಡಿದ್ದಾರೆ.
ಅಜಂಖಾನ್ ಅವರ ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗಳಾಗುತ್ತಿವೆ.